ಹೀರೆಕಾಯಿ ಪರ್ವ

Update: 2020-11-09 19:30 GMT

ಬಾಲ್ಯದಲ್ಲಿ ನಮ್ಮ ಹಳ್ಳಿಯ ಮನೆಮನೆಯ ಸಂಧಿ ಗೊಂದುಗಳಲ್ಲಿ ಹಲವು ತರಹದ ತರಕಾರಿ ಗಿಡಗಳು ಮತ್ತು ಹೂಗಿಡಗಳನ್ನು ಬೆಳೆದಿರುತ್ತಿದ್ದರು. ಹಲವು ತರಹದ ತರಕಾರಿ ಬಳ್ಳಿಗಳು ಕೂಡ ಮನೆಯ ಸೂರನ್ನು ಆಕ್ರಮಿಸಿರುತ್ತಿದ್ದವು. ಅವು ಕಾಯಿ ಬಿಟ್ಟಾಗ ಕೀಳುವ ಸರದಿ ಮನೆಯ ಚಿಕ್ಕ ಮಕ್ಕಳದು. ದೊಡ್ಡವರು ಏರಿದರೆ ಹೆಂಚು ಮುರಿವ ಭಯಕ್ಕೆ ನಾವು ಏರಿ ಅವನ್ನು ಕಿತ್ತು ಕೊಡಬೇಕಿತ್ತು. ಅಂತಹ ಸಮಯದಲ್ಲೇ ನಾವು ಎಂದೋ ಎಸೆದು ಮಾಯವಾಗಿದ್ದ ಬಾಲು, ಆಟದ ಸಾಮಾನುಗಳು ಕೂಡ ಪತ್ತೆಯಾಗುತ್ತಿದ್ದವು. ಮನೆಯಲ್ಲೇ ಬೆಳೆಯುವ ತರಕಾರಿ, ಹೂವು ಏನೋ ಒಂದು ಬಗೆಯ ಆನಂದವನ್ನು ಕೊಡುತ್ತಿತ್ತು. ಈಗಲೂ ನಗರದ ಬಾಲ್ಕನಿಗಳಲ್ಲಿ ಬೆಳೆಯುವ ಹಂಬಲ ಸಾವಿರಾರು ಜನರಿಗೆ ಇದೆ. ಅದರಲ್ಲಿ ಕೆಲವರು ಮಾತ್ರವೇ ಯಶಸ್ವಿಯಾಗುತ್ತಾರೆ. ಮಣ್ಣು, ಗೊಬ್ಬರ, ಬೀಜ ಎಲ್ಲವು ಈಗ ಕಷ್ಟ.

ಹಣವಿದ್ದರೆ ಸುಲಭ. ಇಂತಹ ಬಾಲ್ಕನಿ ತೋಟಗಳಿಗೆ ಅಗತ್ಯ ಸಾಮಗ್ರಿಗಳನ್ನೂ ಪೂರೈಸಲೆಂದೇ ಹಲವು ವ್ಯವಹಾರ ಸಂಸ್ಥೆಗಳು ಕೂಡ ಹುಟ್ಟಿಕೊಂಡಿವೆ. ಆದರೆ ನಮ್ಮ ಹಳ್ಳಿಯ ಬೆಳೆಯ ಸೊಗಡು ಎಲ್ಲಿಂದ ಬರಬೇಕು? ಹೀರೆಕಾಯಿ ಎಂದಾಕ್ಷಣ ಮಳೆಗಾಲದ ಸಂಜೆಗಳಲ್ಲಿ ಬೇಯುವ ಬಜ್ಜಿಯದೇ ನೆನಪು. ಉಳಿದಂತೆ ಸಾರಿನಲ್ಲಿ ಬರುವ ಹೀರೆಕಾಯಿ ನಮಗೆ ಇಷ್ಟವಾಗುತ್ತಿರಲಿಲ್ಲ. ಕೆಲವು ವೇಳೆ ಅದು ತೀರ ಬೆಂದು ಹೋಗಿರುತ್ತಿತ್ತು ಅಥವಾ ಅರ್ಧ ಬೆಂದು ಹಸಿ ಆಗಿರುತ್ತಿತ್ತು. ಸರಿಯಾಗಿ ಹೊರಗಿನ ನಾರು ಬಿಡಿಸದೇ ಇದ್ದರೇ ತಿನ್ನುವಾಗ ಏನೋ ಸಿಕ್ಕಿದಂತೆ ಭಾಸವಾಗುತ್ತಿತ್ತು. ಹಾಗಾಗಿ ಬಜ್ಜಿ ಬಿಟ್ಟು ಬೇರೆಯ ಹೀರೆಯ ಅಡುಗೆ ಪದಾರ್ಥವನ್ನು ಮುಟ್ಟುತ್ತಲೇ ಇರಲಿಲ್ಲ. ಆ ಸಮಯದಲ್ಲಿ ನಗರದ ನಾವಿದ್ದ ಮನೆಯ ನೆರೆಯಲ್ಲಿದ್ದ ಅಜ್ಜಿಯೊಬ್ಬರು ಅಮ್ಮನಿಗೆ ಮಸ್ಕಾಯಿ ಸಾಂಬಾರು ಹೇಳಿಕೊಟ್ಟರು.

ಹೀರೆಕಾಯಿ, ತೊಗರಿಬೇಳೆಗಳ ಮಿಶ್ರಣದಲ್ಲಿ ಬೇಯಿಸಿ ಅರೆದು ಮಾಡಿದ ಸಾರು. ಅದೇಕೋ ಬಹಳ ಇಷ್ಟವಾಗಿ ಬಿಟ್ಟಿತು. ಅಲ್ಲಿಂದ ಹೀರೆಕಾಯಿ ಆಸಕ್ತಿಯ ತರಕಾರಿ ಆಯಿತು. ಹಳೇ ಮೈಸೂರು ಭಾಗದಲ್ಲಿ ಯಾವ ಸೊಪ್ಪು-ತರಕಾರಿ ಸಿಕ್ಕಿದರೂ ಅದರಿಂದ ಉಪ್ಸಾರು-ಬಸ್ಸಾರು ಮಾಡುವುದು ಬಿಡುವುದಿಲ್ಲ. ಇಲ್ಲಿನ ಸಾರುಗಳ ಮೂಲ ಧಾತು ಇರುವುದೇ ಇವೆರಡು ಸಾರುಗಳಲ್ಲಿ. ಉಳಿದವೆಲ್ಲಾ ಇವುಗಳಿಂದ ಕವಲೊಡೆದು ಬೆಳೆದ ಸಾರು ಸಂತತಿಗಳು. ಹಾಗಾಗಿ ಹೀರೆಕಾಯಿ ಮತ್ತು ತೊಗರಿಬೇಳೆಯ ಉಪ್ಸಾರು ಕಾಯಿಯ ಸೀಜನ್ ಬಂದಾಗೆಲ್ಲಾ ಅಥವಾ ಮನೆಯಲ್ಲಿ ಬಳ್ಳಿ ಬಿಟ್ಟಾಗಲೆಲ್ಲ ನಡೆಯುತ್ತಲೇ ಇರುತ್ತದೆ. ಹೀರೆಕಾಯಿಯಲ್ಲಿ ಈಗ ಹಲವು ಹೈಬ್ರಿಡ್ ತಳಿಗಳು ಲಭ್ಯ. ಉದ್ದ, ಸಣ್ಣ ಮತ್ತು ತಿರುಳು/ಬೀಜ ಕಡಿಮೆ ಇರುವ ಹೀಗೆ ನಾನಾ ವಿಧದ ಬಳ್ಳಿಗಳು ಮಾರುಕಟ್ಟೆಯಲ್ಲಿವೆ. ತರಕಾರಿ ಬೆಳೆಯುವ ರೈತರು ಕೂಡ ಇಂತಹ ಬೇಡಿಕೆಯುಳ್ಳ ತಳಿಗಳನ್ನು ಮಾತ್ರವೇ ಬೆಳೆದು ಮಾರುತ್ತಾರೆ.

ನಾಟಿ ತಳಿಗಳಲ್ಲಿ ಹೆಚ್ಚಿನವು ಗಿಡ್ಡ ಮತ್ತು ದಪ್ಪಗಾತ್ರದವು. ಮೊದಲು ಬೆಳೆಯುವ ಕಾಯಿಗಳಲ್ಲೇ ಕೆಲವನ್ನು ಬೀಜಕ್ಕೆಂದು ಮೀಸಲಿಟ್ಟು ಅವು ದಪ್ಪನಾಗಿ, ಮಾಗಿ ಬಳ್ಳಿಯಲ್ಲೇ ಒಣಗಿ ಅಲ್ಲಾಡಿಸಿದರೆ ಬೀಜಗಳ ಶಬ್ದ ಕೇಳಿಸಬೇಕು. ಆಗ ಕಿತ್ತು ಜೋಪಾನವಾಗಿ ಬಿತ್ತನೆಗೆ ಎತ್ತಿಡುತ್ತಿದ್ದರು. ಮಾರುಕಟ್ಟೆಗೆ ಹೈಬ್ರಿಡ್ ಬೀಜಗಳು ಬಂದ ಮೇಲೆ ಈ ಕ್ರಮ ಬಹುತೇಕ ನಿಂತುಹೋಗಿದೆ. ನೈಸರ್ಗಿಕವಾಗಿ ಅದೆಷ್ಟೋ ನಾಟಿ ತಳಿಗಳು ಕಾಣೆಯಾಗಿವೆ. ಇದರ ತುಪ್ಪದ ಹೀರೆ/ ತುಪ್ಪೀರೆ ಎಂಬ ತಳಿ ಈಗಲೂ ಅಲ್ಲಲ್ಲಿ ಉಳಿದುಕೊಂಡಿದೆ. ಸಣ್ಣ ಗಾತ್ರದ, ಬೇಯಿಸಿದಾಗ ತುಪ್ಪದಂತೆ ಮೆದುವಾಗಿ ರುಚಿಯಾಗಿರುವ ಈ ಹೀರೆಯನ್ನು ಬಾಲ್ಯದಲ್ಲಿ ನಮ್ಮ ತೋಟಗಳಲ್ಲಿ ಬೆಳೆದದ್ದು ಉಂಟು. ಗಿಡ್ಡ ತಳಿಯಾದ ಇದರ ಸಿಪ್ಪೆಯನ್ನು ಹದವಾಗಿ ಒರೆದು ತಿರುಳು/ಬೀಜ ತೆಗೆದು ಸಣ್ಣಗೆ ಹಚ್ಚಿ ಅಕ್ಕಿ ತರಿಯ ಉಪ್ಪಿಟ್ಟಿಗೆ ಬಳಸುತ್ತಿದ್ದರು. ಹಾಗೆಯೆ ಹಲವು ತರಹದ ಸಾರು ಮತ್ತು ಪಲ್ಯಗಳಿಗೆ ಕಾಳುಗಳ ಜೊತೆಯಾಗುತ್ತಿತ್ತು. ಬಲಿತ ಹೀರೆ ತಿನ್ನಲು ಯೋಗ್ಯವಲ್ಲ ಅದು ದನಕರುಗಳಿಗೆ ಮೇವಾಗುತ್ತಿತ್ತು. ಆದರೆ ಎಳೆಯ ಹೀರೆಯನ್ನು ಕತ್ತರಿಸಿ ಬೇಳೆ ಅಥವಾ ಕಾಳುಗಳ ಜೊತೆಗೆ ಅಥವಾ ವಿವಿಧ ಬಗೆಯ ಸೊಪ್ಪುಗಳ ಜೊತೆಗೆ ಬೇಯಿಸಿ ನಂತರ ಬಸಿದು ಈರುಳ್ಳಿ ಕಾಯಿತುರಿಯ ಒಗ್ಗರಣೆಯ ಜೊತೆಗೆ ಪಲ್ಯ ಮಾಡಲಾಗುತ್ತಿತ್ತು. ಈಗಲೂ ನಮ್ಮ ಮನೆಯಲ್ಲಿ ಈ ಕ್ರಮ ಚಾಲ್ತಿಯಲ್ಲಿದೆ. ಇಲ್ಲವೇ ಹಚ್ಚಿದ ಹೀರೆಯನ್ನು ಚೆನ್ನಾಗಿ ಎಣ್ಣೆಯಲ್ಲಿ ಹುರಿದು ಕಡ್ಲೆ ಕಾಳಿನ ಜೊತೆಗೆ ಮಸಾಲೆ ಹಾಕಿ ಬೇಯಿಸಿ ಹುರಿದೆಸರು ಮಾಡುತ್ತಿದ್ದರು. ಹುಡುಕಿ ಹೊರಟರೆ ಬೇರೆ ಬೇರೆ ಪ್ರಾಂತಗಳಲ್ಲಿ ಹಲವು ತರಹದ ಅಡುಗೆಗಳನ್ನು ಕಾಣಬಹುದು. ಹೀರೆಕಾಯಿಯ ಸಿಪ್ಪೆಯನ್ನು ತೆಗೆದ ಮೇಲೆ ಅದನ್ನು ಎಸೆಯುವುದೇ ಬೇಡ. ಅದನ್ನು ಎಣ್ಣೆಯಲ್ಲಿ ಹುರಿದುಕೊಂಡು ಬಿಳಿ ಎಳ್ಳು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆ, ಕರಿಬೇವು ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿಕೊಂಡು ನಂತರ ಅದಕ್ಕೆ ಹುರಿಗಡಲೆ ಹಾಕಿ ನುಣ್ಣಗೆ ಅರೆದು ಅದಕ್ಕೆ ಸಾಸುವೆ ಕರಿಬೇವಿನ ಒಗ್ಗರಣೆ ಕೊಟ್ಟರೆ ಹೀರೆಕಾಯಿ ಸಿಪ್ಪೆಯ ಚಟ್ನಿ ಸಿದ್ದವಾಗುತ್ತದೆ.

ಮಸ್ಕಾಯಿ ಸಾರು: ಹಚ್ಚಿಕೊಂಡ ಹೀರೆಕಾಯಿಯ ತುಂಡುಗಳು, ಸ್ವಲ್ಪತೊಗರಿ/ಹೆಸರು ಬೇಳೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೊ, ಚೂರು ಅರಿಶಿನ ಪುಡಿ ಹಾಕಿ ಚೆನ್ನಾಗಿ ಬೇಯಿಸಿ ಬಸಿದುಕೊಂಡು ನಂತರ ತೆಂಗಿನ ತುರಿಯ ಜೊತೆಗೆ ಬೆಂದ ಕಾಯಿ ಮತ್ತು ಬೇಳೆಯ ಕಟ್ಟನ್ನು ಅರೆದುಕೊಂಡು ಮತ್ತೆ ಬಸಿದ ನೀರು ಮತ್ತು ಅರೆದ ಬೇಳೆ ಕಟ್ಟು ಕಲಸಿ ಕುದಿಸಿಕೊಂಡು ಸಾಸುವೆ, ಬೆಳ್ಳುಳ್ಳಿ, ಕರಿಬೇವಿನ ಒಗ್ಗರಣೆ ಕೊಟ್ಟರೆ ಮಸ್ಕಾಯಿ ಸಾರು ಸಿದ್ಧ. ಹೀಗೆ ಮುಂದುವರಿದರೆ ಹೀರೆಕಾಯಿಯ ದೋಸೆ, ತೂವ್ವೆ, ಬಗೆಬಗೆಯ ಸಾರುಗಳು, ಪಲ್ಯಗಳ ರಾಶಿಯೇ ಇಂದು ಸಿಗುತ್ತದೆ. ರೆಸಿಪಿಗಳಿಗೆ, ಮಾಡುವ ವಿಧಾನಗಳಿಗೆ ಯೂಟ್ಯೂಬ್ ಎಡತಾಗಿದರೆ ಆಯಿತು. ಸಾಧ್ಯಂತವಾಗಿ ವಿವರಿಸುವ ವೀಡಿಯೊಗಳು ಲಭ್ಯ. ಸಮಯ ಮತ್ತು ಸಾಮಗ್ರಿ ಹೊಂದಿಸಿಕೊಂಡು ಅಡುಗೆ ಮನೆಯಲ್ಲಿ ನಿಂತರೆ ಯಾವುದೂ ಕಷ್ಟವಿಲ್ಲ. ಶ್ರಮಕ್ಕೆ ತಕ್ಕ ಬೆಲೆ ಇಲ್ಲೂ ಉಂಟು. ಆದರೆ ಅಡುಗೆಗೆ ಸಿಗುವುದು ಮಾತ್ರ ಮಾರುಕಟ್ಟೆಯ ಹೈಬ್ರಿಡ್ ಹೀರೆಕಾಯಿ! ಅಧುನಿಕ ಅಡುಗೆ ಪದ್ಧತಿಗಳು ಸಾಕೆನಿಸುವಷ್ಟು ರೇಜಿಗೆ ಹುಟ್ಟಿಸಿವೆ. ಸುಮ್ಮನೆ ಹಾಗೆ ಗಮನಿಸಿ ನೋಡಿ.

ಎಲ್ಲರೂ ಅವರ ಬಾಲ್ಯದ ಅಡುಗೆಗಳನ್ನು, ರುಚಿಗಳನ್ನು ನೆನೆಸಿಕೊಳ್ಳುತ್ತಿದ್ದಾರೆ. ಆಗಾಗ ನಾವು ಬೆಳೆಯುತ್ತಿದ್ದ ತರಕಾರಿ ಸೊಪ್ಪು ನೆನಪಾಗುತ್ತಿವೆ. ವಾಪಸು ಹಳ್ಳಿಗೆ ಹೋಗಬೇಕಿನಿಸುತ್ತಿದೆ. ಆದರೆ ಬದುಕಿನ ನೊಗ ಮತ್ತು ಗೂಟ ನಗರಗಳಲ್ಲಿ ಬಿಗಿದುಕೊಂಡಿವೆ. ಆದಾಗ್ಯೂ ಅವನ್ನು ತಪ್ಪಿಸಿಕೊಂಡು ನಮ್ಮ ಅಡುಗೆ ಕ್ರಮಗಳನ್ನು ಪದಾರ್ಥಗಳನ್ನು ಸುಸ್ಥಿರ ರೀತಿಯಲ್ಲಿ ಬೆಳೆಯುವುದು, ಬಳಸುವುದು ಹೇಗೆ ಅಂತ ಯೋಚಿಸಿ ಕಾರ್ಯೋನ್ಮುಖರಾಗಲು ಇದು ಸಕಾಲ. ಮತ್ತೆ ಮತ್ತೆ ತಡಮಾಡಿದರೆ ನಮಗೆ ಹೀರೆಯೂ ಉಳಿಯುವುದಿಲ್ಲವೇನೋ! ಅಥವಾ ಉಳಿಯುವ ಹೀರೆಯ ತಳಿ ಹೀಗೆಯೇ ಇರುವ ಗ್ಯಾರಂಟಿ ಕೂಡ ಇಲ್ಲ. ಹೀರೆಯ ಬಳ್ಳಿ ಹಬ್ಬುವುದನ್ನು, ಅದರ ಹಳದಿ ಹೂವು ಅರಳುವುದನ್ನು, ಕಾಯಿ ತೂಗುವುದನ್ನು ನಮ್ಮ ಮಕ್ಕಳು ನೋಡದೆ ಇದ್ದರೆ, ಅವುಗಳನ್ನು ಸ್ವತಃ ನೋಡಿ ಆಯ್ದು ತಂದು ಕತ್ತರಿಸಿ ಅಡುಗೆ ಮಾಡುವುದನ್ನು ಕಲಿಯದೆ ಹೋದರೆ ಏನನ್ನು ತಾನೇ ನಾವು ಉಳಿಸಿಕೊಳ್ಳಲು ಸಾಧ್ಯ! ಈ ಮಾತುಗಳ ನಡುವೆ ನೆನಪಾಗುವುದು ಗುಡಾಣಗಳಲ್ಲೋ, ಅಟ್ಟದಲ್ಲೋ ಅಥವಾ ಮನೆಯ ಮುಂದಣ ಜಗುಲಿಯ ಸೂರಿನಲ್ಲೋ ಅಜ್ಜಿ ನೇತು ಬಿಟ್ಟಿದ್ದ, ಬೀಜ ತುಂಬಿ ಸದ್ದು ಮಾಡುತ್ತಿದ್ದ ಒಣ ಹೀರೆಕಾಯಿಗಳು, ಅವು ಬದುಕಿನ ಮಹೋಪಮೆಗಳಂತೆ ಭಾಸವಾಗುತ್ತಿವೆ 

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News