ಸ್ಕಾಟ್ಲೆಂಡ್, ಹಂಗೇರಿ, ಸ್ಲೋವಾಕಿಯಾ ಯುರೋ 2020ಕ್ಕೆ ಅರ್ಹತೆ

Update: 2020-11-13 18:34 GMT

ಪ್ಯಾರಿಸ್: ಸ್ಕಾಟ್ಲೆಂಡ್, ಹಂಗೇರಿ, ಸ್ಲೋವಾಕಿಯಾ ಹಾಗೂ ಉತ್ತರ ಮ್ಯಾಸಿಡೋನಿಯಾ ತಂಡಗಳು ಯುರೋ 2020ರ ಟೂರ್ನಿಯಲ್ಲಿ ಅರ್ಹತೆ ಗಿಟ್ಟಿಸಿಕೊಂಡಿವೆ. ಫುಟ್ಬಾಲ್‌ನಲ್ಲಿ ಅಂಬೆಗಾಲಿಡುತ್ತಿರುವ ಉತ್ತರ ಮ್ಯಾಸಿಡೋನಿಯಾ ತಂಡ ಜಾರ್ಜಿಯಾ ವಿರುದ್ಧ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡು ಮೊದಲ ಬಾರಿ ಯುರೋ ಟೂರ್ನಿಗೆ ಅರ್ಹತೆ ಪಡೆದಿದೆ.

ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆ ಯಿಂದಾಗಿ ಈ ವರ್ಷ ಮುಂದೂಡಲ್ಪಟ್ಟಿರುವ ಯುರೋ ಫುಟ್ಬಾಲ್ ಟೂರ್ನಿಯು 2021ರ ಜೂನ್ ಹಾಗೂ ಜುಲೈನಲ್ಲಿ ನಿಗದಿಯಾಗಿದೆ.

1998ರ ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಯಲ್ಲಿ ಭಾಗವಹಿಸಿದ ಬಳಿಕ ಸ್ಕಾಟ್ಲೆಂಡ್ 10 ಅರ್ಹತಾ ಪಂದ್ಯಗಳಲ್ಲಿ ವಿಫಲವಾಗಿತ್ತು. ಇದೀಗ ಒಂದು ವರ್ಷ ಕಾಯುವುದು ಸ್ಕಾಟ್ಲೆಂಡ್‌ಗೆ ದೊಡ್ಡ ವಿಚಾರವಲ್ಲ.

ಸ್ಕಾಟ್ಲೆಂಡ್ ತಂಡ ಬೆಲ್‌ಗ್ರೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಸರ್ಬಿಯ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಯುರೋ ಟೂರ್ನಿಗೆ ಅರ್ಹತೆ ಪಡೆದಿದೆ. ಸ್ಕಾಟ್ಲೆಂಡ್-ಸರ್ಬಿಯ ನಡುವಿನ ಪಂದ್ಯ ನಿಗದಿತ 90 ನಿಮಿಷಗಳಲ್ಲಿ 1-1ರಿಂದ ಸಮಬಲಗೊಂಡಿದ್ದು ಹೀಗಾಗಿ ಹೆಚ್ಚುವರಿ ಸಮಯದಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಯಿತು.

ಗೋಲ್‌ಕೀಪರ್ ಡೇವಿಡ್ ಮಾರ್ಷಲ್ ಉತ್ತಮ ಪ್ರದರ್ಶನದ ನೆರವಿನಿಂದ ಸ್ಕಾಟ್ಲೆಂಡ್ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಜಯಶಾಲಿಯಾಯಿತು. 9 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಸ್ಕಾಟ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಆಡಲು ವೆಂಬ್ಲೆಗೆ ತೆರಳಲಿದೆ. ‘ಡಿ’ ಗುಂಪಿನ ಪಂದ್ಯದಲ್ಲಿ ಝೆಕ್ ಗಣರಾಜ್ಯ ಹಾಗೂ ಕ್ರೊಯೇಶಿಯ ತಂಡವನ್ನೂ ಸ್ಕಾಟ್ಲೆಂಡ್ ಎದುರಿಸಲಿದೆ.

ಬೆಲ್‌ಫಾಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಲೋವಾಕಿಯಾ ತಂಡದ ವಿರುದ್ಧ್ದ್ದ ಹೆಚ್ಚುವರಿ ಸಮಯದಲ್ಲಿ 2-1 ಅಂತರದಿಂದ ಸೋತಿರುವ ಉತ್ತರ ಐರ್‌ಲ್ಯಾಂಡ್ ತಂಡ ಮುಂದಿನ ವರ್ಷದ ಯುರೋಪಿಯನ್ ಚಾಂಪಿಯನ್‌ಶಿಪ್‌ನಿಂದ ವಂಚಿತವಾಗಿದೆ.

ಸೆಮಿ ಫೈನಲ್ಸ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ರಿಪಬ್ಲಿಕ್ ಐರ್‌ಲ್ಯಾಂಡ್ ತಂಡವನ್ನು ಸೋಲಿಸಿದ್ದ ಸ್ಲೋವಾಕಿಯಾ ‘ಇ’ ಗುಂಪಿನಲ್ಲಿ ಪೊಲ್ಯಾಂಡ್, ಸ್ಪೇನ್ ಹಾಗೂ ಸ್ವೀಡನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಹಂಗೇರಿ ವಿರುದ್ಧ ಅರ್ಹತಾ ಪಂದ್ಯದಲ್ಲಿ 11ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದ ಐಸ್‌ಲ್ಯಾಂಡ್ ತಂಡ ಸತತ ಮೂರನೇ ಬಾರಿ ಟೂರ್ನಮೆಂಟ್‌ಗೆ ಅರ್ಹತೆ ಪಡೆಯುವ ವಿಶ್ವಾಸ ಮೂಡಿಸಿತ್ತು. 88ನೇ ನಿಮಿಷದಲ್ಲಿ ಗೋಲು ಗಳಿಸಿದ ಹಂಗೇರಿ ಸ್ಕೋರನ್ನು ಸಮಬಲಗೊಳಿಸಿತು. ಇಂಜುರಿ ಟೈಮ್‌ನ ಎರಡನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಹಂಗೇರಿ 2-1 ಅಂತರದಿಂದ ಜಯ ಸಾಧಿಸಿತು.

ಎರಡು ಬಾರಿ ವಿಶ್ವಕಪ್‌ನಲ್ಲಿ ರನ್ನರ್ಸ್-ಅಪ್ ಆಗಿರುವ ಹಂಗೇರಿ 2016ರ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ-16ರ ಸುತ್ತು ತಲುಪಿತ್ತು. ‘ಎಫ್’ ಗುಂಪಿನಲ್ಲಿ ಸ್ಥಾನ ಪಡೆದಿರುವ ಹಂಗೇರಿ ವಿಶ್ವ ಚಾಂಪಿಯನ್ ಫ್ರಾನ್ಸ್, ಜರ್ಮನಿ ಹಾಗೂ ಹಾಲಿ ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

37ರ ವಯಸ್ಸಿನ ಹಿರಿಯ ಸ್ಟ್ರೈಕರ್ ಗೊರಾನ್ ಪಾಂಡೆವ್ 56ನೇ ನಿಮಿಷದಲ್ಲಿ ಗಳಿಸಿರುವ ಗೋಲಿನ ನೆರವಿನಿಂದ ಮ್ಯಾಸಿಡೋನಿಯಾ ತಂಡ ಜಾರ್ಜಿಯಾವನ್ನು 1-0 ಅಂತರದಿಂದ ಮಣಿಸಿ ಇದೇ ಮೊದಲ ಬಾರಿ ಯುರೋ ಚಾಂಪಿಯನ್‌ಶಿಪ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. 2010ರ ಚಾಂಪಿಯನ್ಸ್ ಲೀಗ್ ಗೆದ್ದುಕೊಂಡಿರುವ ಇಂಟರ್ ಮಿಲನ್ ತಂಡದ ಸದಸ್ಯರಾಗಿರುವ ಪಾಂಡೆವ್ ಜಿನಾವೊದವರಾಗಿದ್ದ್ದು, ಈ ದೇಶದ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಫಿಫಾ ವರ್ಲ್ಡ್ ರ್ಯಾಂಕಿಂಗ್‌ನಲ್ಲಿ 65ನೇ ಸ್ಥಾನದಲ್ಲಿರುವ ಮ್ಯಾಸಿಡೋನಿಯಾ ‘ಸಿ’ ಗುಂಪಿನಲ್ಲಿ ನೆದರ್‌ಲ್ಯಾಂಡ್, ಆಸ್ಟ್ರೀಯ ಹಾಗೂ ಉಕ್ರೇನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ. ನಾರ್ತ್ ಮ್ಯಾಸಿಡೋನಿಯಾ ತಂಡ ಈ ಮೊದಲು ಪ್ರಮುಖ ಟೂರ್ನಿಯ ಸನಿಹಕ್ಕೂ ಬಂದಿರಲಿಲ್ಲ. 24 ತಂಡಗಳು ಭಾಗವಹಿಸಲಿರುವ ಯುರೋ ಚಾಂಪಿಯನ್‌ಶಿಪ್ ಇಂಗ್ಲೆಂಡ್‌ನ 12 ನಗರಗಳಲ್ಲಿ ನಡೆಯಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ನಿಗದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News