ಪತ್ರಕರ್ತನ ಮೃತದೇಹ ರೈಲು ಹಳಿಯಲ್ಲಿ ಪತ್ತೆ: ಮಹಿಳಾ ಎಸ್ಸೈ, ಕಾನ್‍ಸ್ಟೇಬಲ್ ವಿರುದ್ಧ ಕೊಲೆ ಪ್ರಕರಣ

Update: 2020-11-14 09:38 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಶುಕ್ರವಾರ 22 ವರ್ಷದ ಪತ್ರಕರ್ತ ಸೂರಜ್ ಪಾಂಡೆ ಎಂಬವರ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಪತ್ರಕರ್ತನನ್ನು ಪೊಲೀಸರು ಹತ್ಯೆಗೈದಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿ ದೂರು ದಾಖಲಿಸಿರುವುದರಿಂದ ಮಹಿಳಾ ಎಸ್‍ಐ ಸುನೀತಾ ಚೌರಾಸಿಯಾ, ಆಕೆಯ ಚಾಲಕ ಅಮರ್ ಸಿಂಗ್ ಹಾಗೂ ಕಾನ್‍ಸ್ಟೇಬಲ್ ಒಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಆದರೆ ಸೂರಜ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಿಂದ ಆತ ರೈಲು ಬಡಿದು ಸಾವನ್ನಪ್ಪಿದ್ದಾರೆಂದು ತಿಳಿದು ಬರುತ್ತದೆ ಎಂದು ಉನ್ನಾವೋ ಎಸ್‍ಪಿ ಸುರೇಶ್ ರಾವ್ ಎ ಕುಲಕರ್ಣಿ ತಿಳಿಸಿದ್ದು ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆಂದು ಅವರು ಹೇಳಿದ್ದರೆ.

ಗುರುವಾರ ಬೆಳಿಗ್ಗೆ ಸೂರಜ್ ಮನೆಯಿಂದ ಹೊರ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಆತನ ಮೊಬೈಲ್ ನಾಟ್ ರೀಚೇಬಲ್ ಆಗಿತ್ತು ಎಂದು ಆತನ ಸೋದರ ಮಾವ ಹೇಳಿದ್ದಾರೆ. ಆತ ಮೃತಪಟ್ಟಿದ್ದಾರೆಂಬ ಸುದ್ದಿ ಕುಟುಂಬಕ್ಕೆ ಸಂಜೆ ವೇಳೆ ದೊರಕಿತ್ತು. ಆತನನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೆ ತಮ್ಮ ಸೋದರಳಿಯನನ್ನು ಯಾರು ಕೊಂದಿದ್ದಾರೆಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಸೂರಜ್ ಪಾಂಡೆ ಮಹಿಳಾ ಎಸ್‍ಐ ಜತೆ ಸಂಪರ್ಕದಲ್ಲಿದ್ದರೆಂದು ಮೊಬೈಲ್ ಫೋನ್ ದಾಖಲೆಗಳಿಂದ ತಿಳಿದು ಬರುತ್ತದೆ. ಆತ ಆಕೆಯನ್ನು ವಿವಾಹವಾಗಲು ಬಯಸಿದ್ದ ಆದರೆ ಆಕೆ ಒಪ್ಪಿರಲಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

ಮಹಿಳಾ ಎಸ್‍ಐ ತಮ್ಮ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು, ಸೂರಜ್ ಸಾವನ್ನಪ್ಪಿದ ಮುನ್ನಾ ದಿನ ಆಕೆಯ ಚಾಲಕ ಆತನಿಗೆ ಬೆದರಿಕೆಯೊಡ್ಡಿದ್ದ ಎಂದು ಸೂರಜ್ ತಾಯಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News