ರಾಜಸ್ಥಾನ ಯುವಕ ಶುಭಂ ಯಾದವ್ ಕಾಶ್ಮೀರ ವಿವಿಯ ಇಸ್ಲಾಮಿಕ್ ಸ್ಟಡೀಸ್ ಎಂಎ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಟಾಪರ್
ಶ್ರೀನಗರ್: ರಾಜಸ್ಥಾನದ ಆಲ್ವಾರ್ ನಿವಾಸಿಯಾಗಿರುವ 21 ವರ್ಷದ ಶುಭಂ ಯಾದವ್ ಅವರು ಸೆಂಟ್ರಲ್ ಯುನಿವರ್ಸಿಟಿ ಆಫ್ ಕಾಶ್ಮೀರ್ ಇಲ್ಲಿನ ಇಸ್ಲಾಮಿಕ್ ಸ್ಟಡೀಸ್ ಸ್ನಾತ್ತಕೋತ್ತರ ಕೋರ್ಸ್‍ಗೆ ನಡೆದ ಅಖಿಲ ಭಾರತ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 93 ಅಭ್ಯರ್ಥಿಗಳ ಪೈಕಿ ಟಾಪರ್ ಆಗಿ ಹೊರಹೊಮ್ಮಿದ್ದಾರಲ್ಲದೆ ಈ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆದ ಪ್ರಥಮ ಮುಸ್ಲಿಮೇತರ ಹಾಗೂ ಕಾಶ್ಮೀರದ ಹೊರಗಿನ ಅಭ್ಯರ್ಥಿಯಾಗಿದ್ದಾರೆ.
ಅಷ್ಟಕ್ಕೂ ಇಸ್ಲಾಮಿಕ್ ಸ್ಟಡೀಸ್ ವಿಷಯದಲ್ಲಿ ಈ ರಾಜಸ್ಥಾನದ ಯುವಕನಿಗೆ ಹೇಗೆ ಆಸಕ್ತಿ ಹುಟ್ಟಿಕೊಂಡಿತು ಎಂಬ ಕಾರಣವೇ ಅಚ್ಚರಿ. ಇಸ್ಲಾಂ ವಿರುದ್ಧ ಹೆಚ್ಚುತ್ತಿರುವ ದ್ವೇಷ ಹಾಗೂ ಜಗತ್ತಿನಾದ್ಯಂತ ಆಗುತ್ತಿರುವ ಧಾರ್ಮಿಕ ಧ್ರುವೀಕರಣವನ್ನು ಗಮಿನಿಸಿ ಇಸ್ಲಾಂ ಬಗ್ಗೆ ಇನ್ನಷ್ಟು ತಿಳಿಯಬೇಕೆಂದು ಅವರಲ್ಲಿ ಹುಟ್ಟಿಕೊಂಡ ಕುತೂಹಲವೇ ಅವರು ಈ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಕಾರಣ ಎಂದು ಶುಭಂ ಹೇಳುತ್ತಾರೆ.
"ಇಸ್ಲಾಮಿಕ್ ಸ್ಟಡೀಸ್ ಕೇವಲ ಮುಸ್ಲಿಮರ ಕುರಿತ ಅಧ್ಯಯನವಲ್ಲ ಬದಲು ಇಸ್ಲಾಮಿಕ್ ಕಾನೂನು ಹಾಗೂ ಸಂಸ್ಕೃತಿಯ ಆಳವಾದ ಅಧ್ಯಯನ,'' ಎಂದು ಅವರು ಹೇಳುತ್ತಾರೆ.
ಐಎಎಸ್ ಅಧಿಕಾರಿಯಾಗುವ ಉದ್ದೇಶವನ್ನು ಹೊಂದಿರುವ ಶುಭಂ ಪ್ರಕಾರ ಭವಿಷ್ಯದಲ್ಲಿ ಇಸ್ಲಾಂ ಧರ್ಮದ ಕುರಿತು ಹೆಚ್ಚಿನ ಜ್ಞಾನವಿರುವವರು ಆಡಳಿತಕ್ಕೆ ಬೇಕಾಗಬಹುದು, ಆಗ ಅಂತಹ ಸ್ಥಾನದಲ್ಲಿ ಇರಲು ನಾನು ಇಚ್ಛಿಸುತ್ತೇನೆ,'' ಎಂದು ಹೇಳಿದರು.
ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಸೆಂಟ್ರಲ್ ಯುನಿವರ್ಸಿಟಿ ಆಫ್ ಕಾಶ್ಮೀರದ ಧಾರ್ಮಿಕ ಅಧ್ಯಯನಗಳ ವಿಭಾಗದ ಮುಖ್ಯಸ್ಥರಾದ ಹಮೀದುಲ್ಲಾಹ್ ಮರಾಝಿ ಅವರು ಶುಭಂ ಅವರಿಗೆ ಕರೆ ಮಾಡಿ ಅವರನ್ನು ಅಭಿನಂದಿಸಿದ್ದಾರೆ.
"ಶುಭಂ ಹೆಸರು ಪಟ್ಟಿಯಲ್ಲಿ ಟಾಪರ್ ಎಂದು ನೋಡಿ ಖುಷಿಯಾಯಿತು. ಈ ವಿಭಾಗವನ್ನು 2015ರಲ್ಲಿ ಆರಂಭಿಸಲಾಗಿತ್ತು. ಅಂದಿನಿಂದ ದೇಶದ ವಿವಿಧೆಡೆಗಳ ಹಲವು ಮುಸ್ಲಿಮೇತರ ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ಶಿಕ್ಷಣ ಪಡೆದಿದ್ದಾರೆ. ನಾವು ನಡೆಸುವ ಇಸ್ಲಾಮಿಕ್ ಸ್ಟಡೀಸ್ ಹಾಗೂ ಕಂಪ್ಯಾರೇಟಿವ್ ರಿಲಿಜನ್ ಕೋರ್ಸುಗಳಿಗೆ ಎಲ್ಲಾ ಧರ್ಮದವರೂ ಸೇರುತ್ತಾರೆ, ಆದರೆ ಕಾಶ್ಮೀರದ ಹೊರಗಿನವರು ಟಾಪರ್ ಆಗಿದ್ದು ಇದೇ ಮೊದಲು,'' ಎಂದು ಹೇಳಿದರು.
ತತ್ವಶಾಸ್ತ್ರದಲ್ಲಿ ಪದವಿ ಪೂರೈಸಿರುವ ಶುಭಂ ಅವರು ಹಲವಾರು ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಿ ಅವುಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಹಾಗೂ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್‍ಗೆ ಸೇರದೇ ಇರಬಹುದು. ದಿಲ್ಲಿ ವಿವಿಯಲ್ಲಿ ಕಾನೂನು ಶಿಕ್ಷಣ ಪಡೆಯುವುದು ಅವರ ಮೊದಲ ಆದ್ಯತೆ. ದಿಲ್ಲಿ ವಿವಿಯ ಕಾನೂನು ಕೋರ್ಸಿನ ಪ್ರವೇಶ ಪರೀಕ್ಷೆ ಫಲಿತಾಂಶ ನವೆಂಬರ್ 18ರಂದು ಬರಲಿದೆ.
"ನನ್ನ ಮೊದಲ ಆದ್ಯತೆ ಕಾನೂನು ಶಿಕ್ಷಣ ಪಡೆಯುವುದು. ಯುಪಿಎಸ್‍ಸಿ ಪರೀಕ್ಷೆಗೆ ಹಾಜರಾಗುವ ಉದ್ದೇಶವೂ ಇದೆ,'' ಎಂದು ಅವರು ಹೇಳುತ್ತಾರೆ.
ಶುಭಂ ತಂದೆ ರಾಜಸ್ಥಾನದಲ್ಲಿ ಸಣ್ಣ ವ್ಯಾಪಾರಿಯಾಗಿದ್ದರೆ, ತಾಯಿ ಇತಿಹಾಸ ಶಿಕ್ಷಕಿ."ನನ್ನ ಫಲಿತಾಂಶ ನೋಡಿ ಅವರಿಗೆ ಖುಷಿಯಾಗಿದೆ. ನನಗೆ ಯಾವ ಕ್ಷೇತ್ರ ಇಷ್ಟವೋ ಅದರಲ್ಲಿ ಶಿಕ್ಷಣ ಪಡೆಯಲು ಅವರು ಹೇಳಿದ್ದಾರೆ. ಒಂದು ವೇಳೆ ದಿಲ್ಲಿ ವಿವಿ ಪರೀಕ್ಷೆಯಲ್ಲಿ ಸಫಲತೆ ದೊರೆಯದೇ ಇದ್ದರೆ ನಾನು ಸೆಂಟ್ರಲ್ ಯುನಿವರ್ಸಿಟಿ ಆಫ್ ಕಾಶ್ಮೀರದಲ್ಲಿ ಶಿಕ್ಷಣ ಪಡೆಯಬಹುದು. ನಾನು ಯಾವುದೇ ಕ್ಷೇತ್ರದಲ್ಲಿದ್ದರೂ ಇಸ್ಲಾಂ ಕುರಿತ ಅಧ್ಯಯನವನ್ನು ನಡೆಸುತ್ತೇನೆ,'' ಎಂದು ಅವರು ಹೇಳುತ್ತಾರೆ.