ಅಕ್ರಮವಾಗಿ ಅದಿರು ಸಾಗಾಟ ಆರೋಪ : ತನಿಖೆಗೆ ರಮಾನಾಥ ರೈ ಒತ್ತಾಯ
ಮಂಗಳೂರು : ಬಂಟ್ವಾಳ ತಾಲೂಕಿನ ಕೈರಂಗಳದಿಂದ ಮತ್ತು ಮಂಗಳೂರು ತಾಲೂಕಿನ ತೆಂಕ ಎಡಪದವು ಪ್ರದೇಶದಿಂದ ಕೈರಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಆಂಧ್ರಪ್ರದೇಶದ ಸಿಮೆಂಟ್ ಕಂಪೆನಿಗೆ ಹಾಗೂ ತೆಂಕ ಎಡಪದವು ಕಲ್ಲು ಗಣಿಯಿಂದ ತಮಿಳುನಾಡು ಪ್ರದೇಶದ ಸಿಮೆಂಟ್ ಕಂಪೆನಿಗೆ ಅದಿರು ಸಾಗಾಟ ನಡೆದಿರುವ ಬಗ್ಗೆ ದಾಖಲೆ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಇದು ಬಳ್ಳಾರಿ ಯಲ್ಲಿ ಈ ಹಿಂದೆ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಅದಿರು ಸಾಗಾಟದ ಮಾದರಿಯಲ್ಲಿ ನಡೆದ ಅಕ್ರಮವಾಗಿದೆ.ಈ ಹಿಂದೆ ನಾನು ಆರೋಪ ಮಾಡಿದಾಗ ದಾಖಲೆ ಸಲ್ಲಿಸಲಿ ಎಂದು ಶಾಸಕರು ಸವಾಲೊಡ್ಡಿದ್ದಾರೆ. ಇದೀಗ ಶಾಸಕರ ಪತ್ನಿಯ ಹೆಸರಿನಲ್ಲಿ ತೆಂಕ ಎಡಪದವಿನಲ್ಲಿ ಮುರಕಲ್ಲು ತೆಗೆಯಲು ಪರವಾನಿಗೆ ಪಡೆಯಲಾಗಿದೆ. ಈ ಗಣಿಯಿಂದ ಮೇ, 2019ರಿಂದ ಮಾರ್ಚ್ 2020 ರವರೆಗೆ ನಿರಂತರವಾಗಿ ತಮಿಳುನಾಡು ಮತ್ತು ಆಂದ್ರಪ್ರದೇಶದ ಸಿಮೆಂಟ್ ಕಂಪೆನಿಗೆ ಅದಿರು ಸಾಗಾಟ ನಡೆದಿದೆ. ಈ ಬಗ್ಗೆ ದಾಖಲೆ ಇದೆ ಎಂದು ಅವರು ಹೇಳಿದರು.
ಬಾಳೆಪುಣಿ, ಇನೋಳಿ ಸೇರಿದಂತೆ ಕೇರಳದ ಗಡಿ ಭಾಗದ ರೆಡ್ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಸ್ಥಳೀಯರೊಂದಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಧಂದೆಕೋರರು ಇದ್ದಾರೆ. ಇವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಉನ್ನತ ಮಟ್ಟದ ತನಿಖೆ ಅನಿವಾರ್ಯ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಳ್ಳಾರಿ ಮಾದರಿ : ಬಳ್ಳಾರಿಯಲ್ಲಿ ನಡೆದಿದ್ದ ಗಣಿಗಾರಿಕೆಯ ರೀತಿಯ ಅಕ್ರಮ ಗಣಿಗಾರಿಕೆ ಮುಡಿಪು ,ಕೈರಂಗಳ,ಬಾಳೆಪುಣಿಯಲ್ಲಿ ನಡೆದಿದೆ. ಮನೆ ಕಟ್ಟಲು ಐದು ಸೆಂಟ್ಸ್ ಜಾಗದಲ್ಲಿ ಕೆಂಪು ಕಲ್ಲು ಕಡಿಯಲೆಂದು ಪರ್ಮಿಟ್ ಪಡೆದವರೂ ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಒಂದು ಗ್ರಾಮದಲ್ಲಿ ಕಲ್ಲು ಕೋರೆಗೆ ಪರ್ಮಿಟ್ ಪಡೆದಿರುವವರಿಗೆ ಮಣ್ಣು ಸಾಗಾಟ ಮಾಡಲು ಅನುಮತಿ ಇರುವುದಿಲ್ಲ ಮತ್ತು ಬೇರೆ ಕಡೆ ಅದೇ ಪರ್ಮಿಟ್ ತೋರಿಸಿ ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಆದರೆ ತೆಂಕ ಎಡಪದವಿನಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದವರು ಮುಡಿಪುವಿನಲ್ಲಿ ಗಣಿಗಾರಿಕೆ ನಡೆಸಯತ್ತಿದ್ದಾರೆ ಮತ್ತು ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದವರು ಅಲ್ಲಿಂದ ಬ್ರಹತ್ ಪ್ರಮಾಣದ ಮಣ್ಣು ಸಾಗಾಟ ಏಕೆ ಮಾಡುತ್ತಿ ದ್ದಾರೆ ?.ಈ ಮಣ್ಣಿನಲ್ಲಿ ಯಾವ ಖನಿಜ ಇದೆ ? ಎನ್ನುವುದನ್ನು ಸಂಬಂಧ ಪಟ್ಡ ಇಲಾಖೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳ ಬೇಕು. ಗಣಿಗಾರಿಕೆ ನಡೆಸುತ್ತಿರುವಲ್ಲಿ ಇತರ ಖನಿಜ ಕಂಡು ಬಂದರೆ ಅದನ್ನು ಪರವಾನಿಗೆ ಪಡೆದ ಸಂಸ್ಥೆಗೆ ತಿಳಿಸಬೇಕಾಗಿದೆ.ಆದರೆ ಮುಡಿಪು ಪರಿಸರದಲ್ಲಿ ಈ ರೀತಿಯ ಗಣಿಗಾರಿಕೆ ಯ ವಿರುದ್ಧ ಸ್ಥಳೀಯರು ಈಗಾಗಲೇ ದೂರು ನೀಡಿದ್ದಾರೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸಾರ್ವಜನಿಕರ ಸಂಚಾರ, ಪರಿಸರದ ಮೇಲೆ ಈ ಗಣಿಗಾರಿಕೆಯಿಂದ ದುಷ್ಪರಿಣಾಮ ಉಂಟಾಗುತ್ತಿದೆ, ಪರಿಣಾಮ ಬೀರುತ್ತಿದೆ.ಈ ಅಕ್ರಮ ತಡೆಯಲು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಐವನ್ ಡಿ ಸೋಜ, ಜೆ.ಆರ್.ಲೋಬೊ, ಶಶಿಧರ ಹೆಗ್ಡೆ,ಹರಿನಾಥ್, ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್ ಮೊದಲಾದ ವರು ಉಪಸ್ಥಿತರಿದ್ದರು.