×
Ad

ಸಹಕಾರಿ ಸಂಘ ವಿವಿಧ ಆಯಾಮಗಳಲ್ಲಿ ವಿಸ್ತರಣೆಗೊಂಡಿದೆ : ಡಾ. ರಾಜೇಂದ್ರ ಕುಮಾರ್

Update: 2020-11-14 17:09 IST

ಪುತ್ತೂರು : ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ವಿವಿಧ ಆಯಾಮಗಳಲ್ಲಿ ವಿಸ್ತರಣೆಗೊಂಡಿದೆ. ಕೊರೋನ ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿ ಗುರುತಿಸಿ ಗೌರವಿಸುವ ಕೆಲಸವನ್ನು ಜಿಲ್ಲೆಯ ಸಹಕಾರಿ ಕ್ಷೇತ್ರ ಮಾಡಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಪುತ್ತೂರು ಬಂಟರ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್, ತಾಲೂಕು ಸಹಕಾರಿ ಯೂನಿಯನ್ ಮತ್ತು ಪುತ್ತೂರು ತಾಲೂಕಿನಲ್ಲಿ ಎಲ್ಲಾ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿದರು.

ಜಿಲ್ಲೆಯ ಸಹಕಾರ ಸಂಘಗಳ ಮೂಲಕ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಔಷಧಿ ವಿತರಣೆ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಚಾಲನೆಗೊಳಿಸಿದ ಅವರು ಸಹಕಾರಿ ಕ್ಷೇತ್ರವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಜನಾರೋಗ್ಯದ ಚಿಂತನೆಯನ್ನು ಕೂಡಾ ಮಾಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಹಕಾರ ಸಪ್ತಾಹದ ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಸಹಕಾರ ಚಳವಳಿಯ ತವರು ನೆಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ವಹಿಸಿದ್ದರು. ಹಿರಿಯ ಸಹಕಾರಿಗಳಾದ ಸವಣೂರು ಕೆ. ಸೀತಾರಾಮ ರೈ, ಕರುಣಾಕರ ಗೋಗಟೆ, ಸಹಕಾರ ಸಪ್ತಾಹ ಕಾರ್ಯಕ್ರಮದ ಸಂಚಾಲಕ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ.ಟಿ. ರಂಜನ್ ಅವರನ್ನು ಗೌರವಿಸಲಾಯಿತು.

ಸಹಕಾರದ ತವರು ನೆಲ

ಸಹಕಾರ ಧ್ವಜಾರೋಹಣ ಮಾಡಿದ ಪುತ್ತೂರು ಶಾಸಕ ಹಾಗೂ ಸಹಕಾರಿ ಸಂಜೀವ ಮಠಂದೂರು, ಅವಿಭಜಿತ ಜಿಲ್ಲೆಯ ಸಹಕಾರ ಚಳವಳಿಯ ತವರು ನೆಲ ಎಂಬ ಹೆಗ್ಗಳಿಕೆಗೆ ಪುತ್ತೂರು ಪಾತ್ರವಾಗಿದೆ. ಇಂದು ರಾಷ್ಟ್ರವ್ಯಾಪ್ತಿಯಾಗಿ ಸಹಕಾರ ಕ್ಷೇತ್ರ ವಿಸ್ತರಿಸಿದೆ. ದೇಶದ ಜಿಡಿಪಿ ಬೆಳವಣಿಗೆ ಯಲ್ಲಿ ಸಹಕಾರ ರಂಗದ ಪಾತ್ರ ಶೇ. 40ರಷ್ಟು ಇದೆ. ಪರಿವರ್ತನೆಯತ್ತ ಸಹಕಾರ ಸಂಘಗಳು ಸಾಗುತ್ತಿವೆ. ಟಿಎಪಿಸಿಎಂಎಸ್ ಮತ್ತು ಪಿಎಲ್‍ಡಿ ಬ್ಯಾಂಕ್‍ಗಳನ್ನು ಉಳಿಸುವ ಕೆಲಸ ಸಹಕಾರ ಕ್ಷೇತ್ರದಿಂದ ನಡೆಯಬೇಕು. ಜಿಲ್ಲೆಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಕನಸು ನನಸಾಗಬೇಕ ಎಂದು ಶುಭ ಹಾರೈಸಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವು ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಕೃಷಿಕರು ಸಹಕಾರಿ ಕ್ಷೇತ್ರದ ಬೆಳವಣಿ ಗೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ದೇಶದಲ್ಲಿಯೇ ಶೇ. 100ರಷ್ಟು ಕೃಷಿ ಸಾಲ ಮರು ಪಾವತಿಯಾದ ಜಿಲ್ಲೆ ಇದ್ದರೆ ಅದು ಅವಿಭಜಿತ ದ.ಕ. ಜಿಲ್ಲೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇಲ್ಲಿ ಸಾಲ ವಸೂಲಾತಿಯಲ್ಲ. ಕೃಷಿಕರೇ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿರು ವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಹಕಾರಿ ರಮೇಶ್ ಭಟ್ ಉಪ್ಪಂಗಳ, ಕೊರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ಎಂಬ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಸಂಘಗಳ ನಿಬಂಧಕ ಪ್ರವೀಣ್ ಬಿ. ನಾಯಕ್, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ರಾಜ್ ಶೇಖರ್ ಜೈನ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ಜಿಲ್ಲಾ ಕೆ.ಎಂ.ಎಫ್. ನಿರ್ದೇಶಕ ನಾರಾಯಣ್ ಪ್ರಕಾಶ್ ನೆಲ್ಲಿತ್ತಿ ಮಾರ್, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಪುತ್ತೂರು ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣ ಕುಮಾರ್ ರೈ, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ್ ರೈ ಮೇನಾಲ ಪಾಲ್ಗೊಂಡಿದ್ದರು. 

ಕಾರ್ಯಕ್ರಮದ ಸಂಚಾಲಕ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಎಸ್.ಪಿ. ವಂದಿಸಿದರು. ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News