×
Ad

ಕೇಂದ್ರದ ಜತೆಗಿನ ಸುದೀರ್ಘ ಮಾತುಕತೆಗಳು ವಿಫಲ: ಪ್ರತಿಭಟನೆ ಮುಂದುವರಿಸಲಿರುವ ಪಂಜಾಬ್ ರೈತರು

Update: 2020-11-14 17:57 IST
Photo: thewire.in

ಅಮೃತಸರ, ನ.14: ರೈತ ಸಂಘಟನೆಗಳು, ಪಂಜಾಬ್ ಕೃಷಿ ಇಲಾಖೆ , ರೈಲ್ವೇ ಇಲಾಖೆ ಮತ್ತು ಕೇಂದ್ರ ಕೃಷಿ ಇಲಾಖೆಯ ಪ್ರತಿನಿಧಿಗಳ ಮಧ್ಯೆ ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದಿದ್ದ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದಿರುವ ಹಿನ್ನೆಲೆಯಲ್ಲಿ, ಕೃಷಿ ಕಾಯ್ದೆ ವಿರೋಧಿಸಿ ತಮ್ಮ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಮಾತುಕತೆ ಅಪೂರ್ಣವಾಗಿರುವುದರಿಂದ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ಮುಂದುವರಿಯಲಿದೆ. ನವೆಂಬರ್ 26, 27ರಂದು ಹಮ್ಮಿಕೊಂಡಿದ್ದ ‘ದಿಲ್ಲಿ ಚಲೋ’ ಜಾಥಾವೂ ನಡೆಯಲಿದೆ . ಪಂಜಾಬ್‌ಗೆ ಸರಕು ರೈಲುಗಳ ಸಂಚಾರ ಶೀಘ್ರ ಆರಂಭವಾಗುವ ಸಾಧ್ಯತೆಯಿಲ್ಲ ಎಂದು ರೈತಸಂಘಟನೆಯ ಮುಖಂಡರು ಹೇಳಿರುವುದಾಗಿ ವರದಿಯಾಗಿದೆ.

 ಕೇಂದ್ರದ ನೂತನ ಕೃಷಿ ಕಾಯ್ದೆ ರೈತರಿಗೆ ಅನುಕೂಲವಾಗಿದ್ದು ರೈತರ ಆದಾಯ ಹೆಚ್ಚಲಿದೆ ಎಂದು ಸಭೆಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳು ರೈತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ರೈತ ಸಂಘಟನೆಗಳು ಪಟ್ಟು ಸಡಿಲಿಸಲಿಲ್ಲ ಎಂದು ಮೂಲಗಳು ಹೇಳಿವೆ. ಪಂಜಾಬ್‌ನಲ್ಲಿ ಸರಕು ಸಾಗಣೆಯ ರೈಲು ಸಂಚಾರಕ್ಕೆ ಅವಕಾಶ ನೀಡುವುದಾಗಿ ರೈತ ಸಂಘಟನೆಗಳು ಹೇಳಿದಾಗ, ಪ್ರಯಾಣಿಕರ ರೈಲು ಮತ್ತು ಸರಕು ರೈಲುಗಳ ಸಂಚಾರ ಒಟ್ಟಿಗೇ ಆರಂಭವಾಗಬೇಕು ಎಂದು ಸರಕಾರ ತಿಳಿಸಿತು. ಇದೀಗ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ನವೆಂಬರ್ 18ರಂದು ಚಂಡೀಗಢದಲ್ಲಿ ಸಭೆ ಸೇರಲಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ಕಾನೂನುಬದ್ಧ ಹಕ್ಕು ಎಂದು ಘೋಷಿಸುವಂತೆ ರೈತರು ಒತ್ತಾಯಿಸಿದಾಗ ಅವರು ಈ ಭರವಸೆ ನೀಡಲು ಸಿದ್ಧರಿರಲಿಲ್ಲ ಎಂದು ರೈತ ಸಂಘಟನೆಯ ಪ್ರತಿನಿಧಿ, ಕ್ರಾಂತಿಕಾರಿ ಕಿಸಾನ್ ಯೂನಿಯನ್‌ನ ಮುಖಂಡ ಡಾ ದರ್ಶನ್ ಪಾಲ್ ಸಿಂಗ್ ಸುದ್ಧಿಗಾರರಿಗೆ ತಿಳಿಸಿದರು. ರೈತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರೂಪಿಸಲು ಹಾಗೂ ಸಮಿತಿಯ ವರದಿ ಬರುವವರೆಗೆ ರೈತರು ತಮ್ಮ ಪ್ರತಿಭಟನೆ ಹಿಂಪಡೆಯುವಂತೆ ಕೇಂದ್ರ ಸರಕಾರ ಒತ್ತಾಯಿಸಿತು. ಆದರೆ ರೈತರು ಇದಕ್ಕೆ ಒಪ್ಪಲಿಲ್ಲ ಎಂದು ರೈತ ಸಂಘಟನೆ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News