ತಲೋಜಾ ಜೈಲಿನಲ್ಲಿ ಮಾನವೀಯತೆಯ ವಾತಾವರಣ: ಜೈಲಿನಿಂದ ಪತ್ರ ಬರೆದ ಸ್ಟ್ಯಾನ್ ಸ್ವಾಮಿ
ಮುಂಬೈ: ಎಲ್ಲ ಪ್ರತಿಕೂಲಗಳ ನಡುವೆಯೂ ಇಲ್ಲಿನ ತಲೋಜಾ ಜೈಲಿನಲ್ಲಿ ಮಾನವೀಯತೆಯ ವಾತಾವರಣವಿದೆ ಎಂದು ಖ್ಯಾತ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಹೇಳಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಸ್ಟ್ಯಾನ್ ಸ್ವಾಮಿಯವರ ಆಪ್ತಮಿತ್ರ ಜಾನ್ ದಯಾಳ್ ಅವರು ಸ್ಟ್ಯಾನ್ ಸ್ವಾಮಿ ಈ ಸಂಬಂಧ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಮುಂಬೈ ಹೊರವಲಯದ ತಲೋಜಾದಲ್ಲಿರುವ ಕೇಂದ್ರ ಕಾರಾಗೃಹದ ಪುಟ್ಟ ಕೊಠಡಿಯಲ್ಲಿ ತಮ್ಮನ್ನು ಇತರ ಇಬ್ಬರು ಕೈದಿಗಳ ಜತೆ ಕೂಡಿ ಹಾಕಲಾಗಿದೆ ಎಂದು ವಿವರಿಸಿದ್ದಾರೆ. ಇವರ ಪಕ್ಕದ ಸೆಲ್‍ನಲ್ಲಿ ವರ ವರ ರಾವ್, ವರ್ನಾಣ್ ಗೋನ್ಸಾಲ್ವೇಸ್ ಹಾಗೂ ಅರುಣ್ ಫೆರೇರಾ ಅವರನ್ನು ಬಂಧನದಲ್ಲಿ ಇಡಲಾಗಿದೆ. ಭೀಮಾ ಕೊರೇಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧನದಲ್ಲಿಡಲಾಗಿದೆ.
"ಹಗಲಿನ ವೇಳೆ ಸೆಲ್ ಹಾಗೂ ಬರಾಕ್‍ಗಳನ್ನು ತೆರೆದಾಗ, ನಾವು ಪರಸ್ಪರ ಭೇಟಿಯಾಗುತ್ತೇವೆ" ಎಂದು ಸ್ವಾಮಿ ಬರೆದಿದ್ದಾರೆ. ಸಂಜೆ 5.30ರಿಂದ ಮುಂಜಾನೆ 6.00 ಗಂಟೆವರೆಗೆ ಮತ್ತು ಮಧ್ಯಾಹ್ನ 12 ರಿಂದ 3.00 ಗಂಟೆವರೆಗೆ ಸೆಲ್‍ನಲ್ಲಿ ಇತರ ಸಹ ಕೈದಿಗಳ ಜತೆ ಕೂಡಿಹಾಕುತ್ತಾರೆ ಎಂದು ವಿವರಿಸಿದ್ದಾರೆ.
83 ವರ್ಷ ವಯಸ್ಸಿನ ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು, ಊಟ ಮಾಡಲು ಫೆರೇರಾ ಎಂಬುವವರು ನೆರವಾಗುತ್ತಿದಾರೆ ಎಂದು ಬರೆದಿದ್ದಾರೆ. ಕೈಯಲ್ಲಿ ಲೋಟ ಹಿಡಿದುಕೊಳ್ಳಲೂ ಅಶಕ್ತರಾಗಿರುವುದರಿಂದ ಸ್ಟ್ರಾ ಮತ್ತು ಸ್ಟ್ರಿಪ್ಪರ್ ಬಳಸಲು ಅನುಮತಿ ನೀಡಬೇಕೆಂದು ಸ್ವಾಮಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನವೆಂಬರ್ 28ರಂದು ನಡೆಯಲಿದೆ.
ಎರಡೂ ಕಿವಿಗಳ ಶ್ರವಣಶಕ್ತಿ ನಷ್ಟವಾಗಿದ್ದು, ಹಲವು ಬಾರಿ ಜೈಲಿನಲ್ಲಿ ಅವರು ಬಿದ್ದಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಎರಡು ಬಾರಿ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಇನ್ನೂ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದು ವಿವರಿಸಲಾಗಿದೆ.