×
Ad

ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರಾವಧಿ 1 ವರ್ಷ ವಿಸ್ತರಿಸಿದ ಕೇಂದ್ರ

Update: 2020-11-14 20:38 IST

ಹೊಸದಿಲ್ಲಿ, ನ. 14: ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಕೇಂದ್ರ ಸರಕಾರ ಒಂದು ವರ್ಷ ವಿಸ್ತರಿಸಿದೆ. ಸಂಜಯ್ ಕುಮಾರ್ ಮಿಶ್ರಾ ಅವರಿಗೆ 2018ರಲ್ಲಿ ನೀಡಲಾಗಿದ್ದ ನೇಮಕಾತಿ ಆದೇಶವನ್ನು ಮಾರ್ಪಡಿಸಿದ ಬಳಿಕ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

60ರ ಹರೆಯದ ಮಿಶ್ರಾ ಅವರು ಆದಾಯ ತೆರಿಗೆ ಕೇಡರ್‌ನ 1984ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ ಅಧಿಕಾರಿ. 2018 ನವೆಂಬರ್ 19ರಂದು ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.

ಜಾರಿ ನಿರ್ದೇಶನಾಲಯದ ನಿರ್ದೇಶಕರ ಹುದ್ದೆ ಎರಡು ವರ್ಷಗಳ ನಿಗದಿತ ಅವಧಿಯಾಗಿರುವುದರಿಂದ ಅವರ ಅಧಿಕಾರಾವಧಿ ಮುಂದಿನ ವಾರ ಕೊನೆಗೊಳ್ಳಲಿದೆ.

ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಂದಾಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಆದೇಶದಂತೆ ಮಿಶ್ರಾ ನೇಮಕಾತಿಯ 2018ರ ಆದೇಶವನ್ನು ಮಾರ್ಪಾಡು ಮಾಡಲಾಗಿದೆ.

ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ಸಂಜಯ್ ಕುಮಾರ್ ಮಿಶ್ರಾ ಅವರ 2018 ನವೆಂಬರ್ 19ರ ಈ ಹಿಂದಿನ ನೇಮಕಾತಿ ಆದೇಶವನ್ನು ಮಾರ್ಪಾಡು ಮಾಡಲು ಭಾರತದ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News