×
Ad

ವಿಶ್ವದ 2% ಮಹಾನ್ ವಿಜ್ಞಾನಿಗಳ ಪಟ್ಟಿಯಲ್ಲಿ ಐಐಟಿಯ 36 ವಿಜ್ಞಾನಿಗಳಿಗೆ ಸ್ಥಾನ

Update: 2020-11-14 20:45 IST

ಹೊಸದಿಲ್ಲಿ, ನ.14: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿ ತಯಾರಿಸಿರುವ ವಿಶ್ವದ 2% ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಬನಾರಸ್ ಹಿಂದು ವಿವಿಯ 14 ವಿಜ್ಞಾನಿಗಳು ಸೇರಿದಂತೆ ಭಾರತದ 2 ಐಐಟಿಗಳ 36 ವಿಜ್ಞಾನಿಗಳು ಸ್ಥಾನ ಪಡೆದಿರುವುದಾಗಿ ವರದಿಯಾಗಿದೆ.

ವಿಶ್ವದಲ್ಲಿ ವಿವಿಧ ವಿಭಾಗಗಳಲ್ಲಿ ಹೆಚ್ಚು ಉಲ್ಲೇಖಿಸಲ್ಪಟ್ಟಿರುವ ಉನ್ನತ ವಿಜ್ಞಾನಿಗಳಲ್ಲಿ 2% ವಿಜ್ಞಾನಿಗಳ ಪಟ್ಟಿ ಇದಾಗಿದ್ದು ಇದರಲ್ಲಿ ಗುವಾಹಟಿ ಐಐಟಿಯ 22 ಸಂಶೋಧಕರು, ಬನಾರಸ್ ಹಿಂದು ವಿವಿಯ 14 ಪ್ರೊಫೆಸರ್‌ಗಳು ಸ್ಥಾನ ಪಡೆದಿದ್ದಾರೆ. 2019ರವರೆಗಿನ ಅಂಕಿ ಅಂಶದ ಆಧಾರದಲ್ಲಿ , ತಮ್ಮ ವೃತ್ತಿಜೀವನದ ಅವಧಿಯಲ್ಲಿ ನಡೆಸಿದ ಸಂಶೋಧನೆಗಳನ್ನು ಪರಿಗಣಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. 1,59,683 ಸಂಶೋಧಕರನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ 1,500 ಭಾರತೀಯರಿದ್ದಾರೆ.

ಸ್ಟ್ಯಾನ್‌ಫೋರ್ಡ್ ವಿವಿಯ ಪ್ರೊ ಜಾನ್ ಪಿಎ ಲೋನ್ನಿಡಿಸ್ ಮತ್ತವರ ತಂಡ ಈ ವರದಿ ಸಿದ್ಧಪಡಿಸಿದೆ. 2019ರಲ್ಲಿ ಜಾಗತಿಕ ವಿಚಾರಗೋಷ್ಟಿಗಳಲ್ಲಿ ಮಂಡಿಸಿದ ಪ್ರಬಂಧಗಳು ಹಾಗೂ ಸಂಶೋಧನಾ ವರದಿಗಳ ಆಧಾರದಲ್ಲಿ ಉನ್ನತ ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ವಿವಿ ತಿಳಿಸಿದೆ.

ಅಂತರಾಷ್ಟ್ರೀಯ ಮಟ್ಟದ ಗೋಷ್ಟಿಗಳಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಗಳನ್ನು ಆಧರಿಸಿ ಬನಾರಸ್ ಹಿಂದು ವಿವಿಯ ಅಧೀನದಲ್ಲಿರುವ ಐಐಟಿಯ 14 ಪ್ರೊಫೆಸರ್‌ಗಳನ್ನು ಈ ಪ್ರತಿಷ್ಟಿತ ಪಟ್ಟಿಯಲ್ಲಿ ಪರಿಗಣಿಸಲಾಗಿದೆ ಎಂದು ಬಿಎಚ್‌ಯು ಐಐಟಿ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಹೇಳಿದ್ದಾರೆ.

ಐಐಟಿ ಗುವಾಹಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಫಿಸಿಕ್ಸ್, ಕೆಮಿಕಲ್ ಇಂಜಿನಿಯರಿಂಗ್, ಬಯೊಸೈಯನ್ಸಸ್, ಬಯೋ ಇಂಜಿನಿಯರಿಂಗ್, ಕೆಮಿಸ್ಟ್ರಿ, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗದ 22 ವಿಜ್ಞಾನಿಗಳಿಗೆ ಗೌರವ ದೊರೆತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಪ್ರೊಫೆಸರ್ ಟಿಜಿ ಸೀತಾರಾಮ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News