ಅಭಿವೃದ್ಧಿ ಬಗ್ಗೆ ರಮಾನಾಥ ರೈಯಿಂದ ಬಿಜೆಪಿ ತರಬೇತಿ ಪಡೆಯಲಿ: ಇಬ್ರಾಹೀಂ ನವಾಝ್

Update: 2020-11-14 15:21 GMT

ಬಂಟ್ವಾಳ, ನ.14: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಪ್ರಶ್ನಿಸುವ ಬಿಜೆಪಿಯವರು ಮೊದಲು ಅಭಿವೃದ್ಧಿ ಕೆಲಸ ಹೇಗೆ ಮಾಡಬೇಕೆಂಬುದನ್ನು ರಮಾನಾಥ ರೈ ಅವರಿಂದ ಹತ್ತು ವರ್ಷ ತರಬೇತಿ ಪಡೆಯುವುದು ಒಳಿತು ಎಂದು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನವಾಝ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಜಿಲ್ಲೆಯ ಜನತೆಗೆ ತಿಳಿದಿದೆ. ಬಂಟ್ವಾಳ ಒಂದೇ ಕ್ಷೇತ್ರದಲ್ಲಿ 2 ಸಾವಿರ ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಆದರೂ ಅವರನ್ನು ಟೀಕೆ ಮಾಡುವ ಬಿಜಿಪಿಗರು ಈಗಿನ ಶಾಸಕರು ಮಾಡಿರುವ ಕಣ್ಣಿಗೆ ಕಾಣುವ ಅಭಿವೃದ್ಧಿ ಕಾರ್ಯಗಳು ಏನು ಎಂದು ಪ್ರಶ್ನಿಸಿದರು.

ಮಿನಿ ವಿಧಾನ ಸೌಧಾ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಕೆಇಬಿ ಕಟ್ಟಡ, ನಿರೀಕ್ಷಣಾ ಮಂದಿರ, ನೂರು ಹಾಸಿಗೆಯ ಸುಸಜ್ಜಿತ ತಾಲೂಕು ಆಸ್ಪತ್ರೆ, ಪಾಲಿಟೆಕ್ನಿಕ್, ಅಗ್ನಿಶಾಮಕ ಠಾಣೆ, ಎಲ್ಲಾ ಗ್ರಾಮಗಳುಗೆ ದಿನದ ಇಪ್ಪತ್ತನಾಲ್ಕು ಗಂಟೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ, ಪಂಜೆಮಂಗೆಶ್ವರಾಯ ಭವನ, ಅಂಬೇಡ್ಕರ್ ಭವನ, ಹಲವು ಕಿರು ಸೇತುವೆಗಳು, ಕಿಂಡಿ ಅಣೆಕಟ್ಟುಗಳು ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ರಮಾನಾಥ ರೈ ಅವರು ಬಂಟ್ವಾಳ ತಾಲೂಕಿನ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಬಂಟ್ವಾಳ ಎಂದರೆ ರಮಾನಾಥ ರೈ, ರಮಾನಾಥ ರೈ ಎಂದರೆ ಬಂಟ್ವಾಳ ಆಗಿದೆ ಎಂದರು.

ಅಭಿವೃದ್ಧಿ ಮೂಲಕ ಜನಮಾನಸದಲ್ಲಿ ಉಳಿದ ರಮಾನಾಥ ರೈ ಅವರನ್ನು ಹಸಿ ಹಸಿ ಸುಳ್ಳುಗಳನ್ನು ಹೇಳುವ ಮೂಲಕ ಅಪಪ್ರಚಾರ ಮಾಡಿ ಸೋಲಿಸಲಾಗಿದೆ. ಚುನಾವಣೆಯಲ್ಲಿ ಸೋತರೂ ಅವರು ಜನಸಾಮಾನ್ಯರಿಗೆ ಸ್ಪಂದಿಸುವುದನ್ನು ಅವರು ನಿಲ್ಲಿಸಿಲ್ಲ. ಕೊರೋನ ಸಂದರ್ಭದಲ್ಲಿ ಅವರು ನಾಲ್ಕು ಕೋಟಿ ರೂ.ಗೂ ಅಧಿಕ ಮೊತ್ತದ ಆಹಾರ ಸಾಮಾಗ್ರಿಗಳ ಕಿಟ್ಟಗಳನ್ನು ಬಂಟ್ವಾಳ ಕ್ಷೇತ್ರದ ಜನರಿಗೆ ವಿತರಿಸಿದ್ದಾರೆ. ಅವರು ಸಚಿವರಾಗಿದ್ದ ಸಮಯದಲ್ಲಿ ಜಾರಿ ಮಾಡಿದ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಲೂ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಅವರ ಗೆಲುವು ನಿಶ್ಚಿತ ಎಂದು ಅವರು ನುಡಿದರು.

ರಮಾನಾಥ ರೈ ಅವರನ್ನು ಪದೇ ಪದೇ ವೈಯಕ್ತಿಕವಾಗಿ ನಿಂಧಿಸುತ್ತಿರುವುದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರಿಗೆ ಶೋಭೆ ತರುವಂತದ್ದು ಅಲ್ಲ. ರಾಜಕೀಯವಾಗಿ ಅವರು ಆರೋಪಗಳನ್ನು ಮಾಡಲಿ. ಅದಕ್ಕೆ ನಾವು ಸಮರ್ಥವಾಗಿ ಉತ್ತರಿಸಲಿದ್ದೇವೆ. ರಮಾನಾಥ ರೈ ಮೇಲೆ ನೇರವಾಗಿ ಕೊಲೆ ಆರೋಪ ಹೊರಿಸಿದ ಹರಿಕೃಷ್ಣ ಬಂಟ್ವಾಳ ವಿರುದ್ಧ ಪೊಲೀಸ್ ಠಾಣೆಗಳಿಗೆ ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಮಾತನಾಡಿ, ಪುರಸಭೆಯಲ್ಲಿ ಸೋಲಿನಿಂದ ಹತಾಶೆಗೊಂಡ ಬಿಜೆಪಿಯವರು ಯಾವುದೇ ಆಧಾರ ಇಲ್ಲದೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಹಿಂದಿನ ದಿನ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರಿಗೆ ಬಿಜೆಪಿ‌ ನಾಯಕರು ವಿವಿಧ ಆಮಿಷಗಳನ್ನು ಒಡ್ಡಿ ತಮ್ಮ ಪರ ಮತ ಚಲಾಯಿಸಲು ಉತ್ತಡ ಹೇರಿದ್ದರು. ಅದಕ್ಕಾಗಿ ಅವರು ಆ ಸದಸ್ಯರ ಮನೆಗೆ ಆಗಾಗ ಭೇಟಿ ನೀಡಿದ್ದಾರೆ. ಸದಸ್ಯರು ಮನೆಯಲ್ಲಿ ಇಲ್ಲದಿದ್ದರಿಂದ ಸಂಜೆಯಿಂದ ರಾತ್ರಿವರೆಗೆ ಅವರ ಮನೆಯಲ್ಲಿ ಕಾದು ಕುಳಿತಿದ್ದರು. ಈ ಬಗ್ಗೆ ಕೂಡಾ ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಯುವ ಕಾಂಗ್ರೆಸ್ ಪ್ರಮುಖರಾದ ಆಲ್ವಿನ್ ಪ್ರಶಾಂತ್, ಸುರೇಶ್ ಪೂಜಾರಿ, ಶಫಿಕ್, ಪವನ್, ವಿನಯ ಕುಮಾರ್, ಸುಧೀಂದ್ರ ಶೆಟ್ಟಿ, ಅಕುಂಶ್ ಶೆಟ್ಟಿ, ವಿಶ್ವಜಿತ್, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News