ಪೆರ್ನೆ ನಾಗರಿಕರಿಂದ ಉಪ್ಪಿನಂಗಡಿ ಪೊಲೀಸರಿಗೆ ಸನ್ಮಾನ

Update: 2020-11-14 15:25 GMT

ಉಪ್ಪಿನಂಗಡಿ: ಸಾರ್ವಜನಿಕ ಸೇವೆ ನಿಭಾಯಿಸುವಾಗ ದಕ್ಷ ಹಾಗೂ ಪ್ರಾಮಾಣಿಕತೆಯ ಕರ್ತವ್ಯ ಸಾಧನೆಯಿಂದ ಪೊಲೀಸರು ಸಾರ್ವಜನಿಕ ವಲಯದಲ್ಲಿ ಗುರುತಿಸುವಂತಾಗಬೇಕು. ಹೀಗಾದಾಗ ಸಾರ್ವಜನಿಕರ ಮತ್ತು ಇಲಾಖೆಯ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರೊಬೆಷನರಿ ಐಪಿಎಸ್ ರೋಹನ್ ಜಗದೀಶ್ ತಿಳಿಸಿದರು.

ಪೆರ್ನೆಯ ಬಿಳಿಯೂರಿನಲ್ಲಿ ಇತ್ತೀಚೆಗೆ ನಡೆದ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣವನ್ನು ಕ್ಷಿಪ್ರವಾಗಿ ಬೇಧಿಸಿದ ಉಪ್ಪಿನಂಗಡಿ ಪೊಲೀಸರಿಗೆ ಪೆರ್ನೆ ನಾಗರಿಕರ ಪರವಾಗಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಮಾತನಾಡಿ, ಯಾವುದೇ ಪ್ರಕರಣಗಳು ನಡೆದಾಗ ಸ್ಥಳೀಯರು ಪೊಲೀಸರಿಗೆ ಸಹಕಾರ ನೀಡುವುದಲ್ಲದೆ, ಸಹನೆ- ತಾಳ್ಮೆಯಿಂದ ವರ್ತಿಸುವುದು ಅತೀ ಅಗತ್ಯ. ಸಂಶಯಸ್ಥರನ್ನು ಕಂಡಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಜನರಿಂದಾಗಬೇಕು ಎಂದರು.

ಪ್ರಮುಖರಾದ ಧನ್ಯಕುಮಾರ್ ರೈ ಮಾತನಾಡಿ, ಈ ದರೋಡೆ ಪ್ರಕರಣ ಪೊಲೀಸರಿಗೆ ಯಾವುದೇ ಹೆಚ್ಚಿನ ಸಾಕ್ಷ್ಯಾಧಾರ ದೊರೆಯದಿದ್ದರೂ, ಈ ಪ್ರಕರಣವನ್ನು ಅವರು ಸವಾಲಾಗಿ ಸ್ವೀಕರಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಗ್ರಾಮದಲ್ಲಿ ಭಯಮುಕ್ತ ವಾತಾವರಣ ಪೊಲೀಸರು ನಿರ್ಮಾಣ ಮಾಡಿದ್ದು, ಪೊಲೀಸರ ಈ ಕಾರ್ಯ ಅಭಿನಂದನಾರ್ಹ ಎಂದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಸಾರ್ವಜನಿಕರು ಹಾಗೂ ಪೊಲೀಸರ ಸಂಬಂಧ ಉತ್ತಮವಾಗಿದ್ದರೆ ಮಾತ್ರ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲು ಸಾಧ್ಯ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಇಲಾಖೆಗಳಿಂದಲೂ ಆಗಬೇಕು ಎಂದರು.

ವೇದಿಕೆಯಲ್ಲಿ ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರೋಹಿತಾಕ್ಷ, ಪೆರ್ನೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ರಾದ ಪುಷ್ಪರಾಜ್ ಶೆಟ್ಟಿ, ನರಸಿಂಹ ನಾಯಕ್, ಗ್ರಾ.ಪಂ.ನ ಮಾಜಿ ಸದಸ್ಯರಾದ ಶಿವಪ್ಪ ನಾಯ್ಕ, ವೆಂಕಪ್ಪ ನಾಯ್ಕ, ಯಶೋಧಾ, ಸರಸ್ವತಿ, ನಳಿನಾಕ್ಷಿ, ಭವಿತಾ, ಸ್ಥಳೀಯರಾದ ಸುರೇಶ್ ಕುಲಾಲ್, ಉಮೇಶ್ ನಾಯಕ್, ಕೊರಗಪ್ಪ ಗೌಡ, ಭವಿತ್ ಕಳೆಂಜ, ಸದಾನಂದ ಭಂಡಾರಿ, ರಾಜೇಶ್ ಪದೆಬರಿ, ಜಯೇಶ್ ಕುಲಾಲ್, ಪ್ರಶಾಂತ್ ಬಂಗೇರ ಕಾರ್ಲ ಮತ್ತಿತರರು ಉಪಸ್ಥಿತರಿದ್ದರು.

ಪೆರ್ನೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನವೀನ್ ಪದೆಬರಿ ಸ್ವಾಗತಿಸಿದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿ ಧರ್ನಪ್ಪ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News