ಟ್ರಂಪ್ ಜಯ ಗಳಿಸಿದ್ದಾರೆ ಎಂದು ಬೆಂಬಲಿಗರಿಂದ ಸಂಭ್ರಮಾಚರಣೆ: ಭುಗಿಲೆದ್ದ ಘರ್ಷಣೆ

Update: 2020-11-15 16:46 GMT

ವಾಶಿಂಗ್ಟನ್,ನ.15: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಮತ ವಂಚನೆ ಸೇರಿದಂತೆ ಚುನಾವಣಾ ಅಕ್ರಮಗಳು ನಡೆದಿವೆಯೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪಗಳಿಗೆ ಬೆಂಬಲಿಸಿ ಅವರ ಸಾವಿರಾರು ಬೆಂಬಲಿಗರು ರಾಜಧಾನಿ ವಾಶಿಂಗ್ಟನ್‌ನ ಬೀದಿಗಳಲ್ಲಿ ಬೃಹತ್ ರ್ಯಾಲಿ ನಡೆಸಿದರು,

  ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್, ವಿಜಯಿ ಅಭ್ಯರ್ಥಿಯೆಂದು ಘೋಷಿಸಿದ ಒಂದು ವಾರದ ಬಳಿಕ, ಶನಿವಾರ ಟ್ರಂಪ್ ಬೆಂಬಲಿಗರು ಎಂಎಜಿಎ (ಮೇಕ್ ಅಮೆರಿಕ ಗ್ರೇಟ್ ಎಗೇನ್) ರ್ಯಾಲಿ ನಡೆಸಿದರು. ಸಂಜೆಯವರೆಗೂ ಶಾಂತಿಯುತವಾಗಿಯೇ ರ್ಯಾಲಿ ನಡೆದಿತ್ತಾದರೂ, ಶನಿವಾರ ತಡರಾತ್ರಿ ಟ್ರಂಪ್ ಬೆಂಬಲಿಗರು ಹಾಗೂ ಎದುರಾಳಿ ಪ್ರತಿಭಟನಕಾರರ ನಡುವೆ ಭಾರೀ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಗಳು ಬಂದಿವೆ.

  ಶ್ವೇತಭವನದ ಸಮೀಪದಲ್ಲೇ ಎದುರಾಳಿ ಪ್ರತಿಭಟನಕಾರರು, ಟ್ರಂಪ್ ಬೆಂಬಲಿಗ ರೊಂದಿಗೆ ಮಾರಾಮಾರಿ ಸಂಘರ್ಷಕ್ಕಿಳಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಕಾರನೆಂದು ನಂಬಲಾದ 20 ವರ್ಷ ವಯಸ್ಸಿನ ಯುವಕನಿಗೆ ಘರ್ಷಣೆಯಲ್ಲಿ ಗಂಭೀರ ಗಾಯಗಳಾಗಿವೆ. ಮಾರಾಮಾರಿ ನಡೆದ ಸಂದರ್ಭ ಯುವಕನ ಬೆನ್ನಿಗೆ ಇರಿಯಲಾಗಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

 ಎರಡೂ ಗುಂಪುಗಳು ಲಾಠಿಗಳೊಂದಿಗೆ ಹೊಡೆದಾಡಿಕೊಂಡರು ಹಾಗೂ ಪೊಲೀಸರು ಮಧ್ಯಪ್ರವೇಶಿಸುವವರೆಗೂ ಪರಸ್ಪರ ಗುದ್ದಾಟ, ತಳ್ಳಾಟದಲ್ಲಿ ತೊಡಗಿದ್ದರೆಂದು ವರದಿಗಳು ತಿಳಿಸಿವೆ. ಹಿಂಸಾಚಾರಕ್ಕೆ ಸಂಬಂಧಿಸಿ ಕನಿಷ್ಠ 20 ಮಂದಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

   ಎಂಎಜಿಎ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅಮೆರಿಕದ ವಿವಿಧೆಡೆಯಿಂದ ಟ್ರಂಪ್ ಬೆಂಬಲಿಗರು ಆಗಮಿಸಿದ್ದರು.ರ್ಯಾಲಿಯಲ್ಲಿ ಬೆಂಬಲಿಗರು ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದಿದ್ದಾರೆಂಬ ಘೋಷಣೆಗಳನ್ನು ಕೂಗಿದರು. ತಮ್ಮ ನಾಯಕನಿಗೆ ಬೆಂಬಲವನ್ನು ವ್ಯಕ್ತಪಡಿಸಲು ತಾವು ಆಗಮಿಸಿದ್ದಾಗಿ ಅವರು ಹೇಳಿದರು.

ಟ್ರಂಪ್ ಬೆಂಬಲಿಗರ ರ್ಯಾಲಿಯ ಮೇಲೆ ಟ್ರಂಪ್ ವಿರೋಧಿ ಪ್ರತಿಭಟನಕಾರರು ಮೊಟ್ಟೆಗಳನ್ನು ತೂರಿದರು ಹಾಗೂ ರ್ಯಾಲಿಯಲ್ಲಿ ಭಾಗವಹಿಸಿದ್ದವರ ಭಿತ್ತಿಫಲಕಗಳನ್ನು, ಹ್ಯಾಟ್‌ಗಳನ್ನು ಹಾಗೂ ಬ್ಯಾನರ್‌ಗಳನ್ನು ಕಸಿದುಕೊಂಡರೆಂದು ಫಾಕ್ಸ್ ನ್ಯೂಸ್ ಸುದ್ದಿವಾಹಿನಿ ವರದಿ ಮಾಡಿದೆ.

 ಕೆಲವು ಪ್ರತಿಭಟನಕಾರರು ಹಾಗೂ ವಿರೋಧಿ ಪ್ರತಿಭಟನಕಾರರು ಪರಸ್ಪರ ತಳ್ಳಾಟ, ಗುದ್ದಾಟದಲ್ಲಿ ತೊಡಗಿದ್ದುದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋಗಳಲ್ಲಿ ತೋರಿಸಲಾಗಿದೆ.

ಟ್ರಂಪ್ ಬೆಂಬಲಿಗರು ಉಳಿದುಕೊಂಡಿದ್ದ ಹೊಟೇಲ್‌ನೊಳಗೆ ನುಗ್ಗಲು ಯತ್ನಿಸಿದ ಟ್ರಂಪ್ ವಿರೋಧಿ ಪ್ರತಿಭಟನಕಾರರು, ಕಾನೂನು ಜಾರಿ ಸಿಬ್ಬಂದಿಗಳೊಂದಿಗೆ ಪ್ರತಿಭಟನೆಗಿಳಿದರು.

ಶನಿವಾರ ವರ್ಜಿನಿಯಾ ಉಪನಾಗರದಲ್ಲಿರುವ ಗಾಲ್ಫ್ ಕೋರ್ಸ್‌ಗೆ ಪೆನ್ಸಿಲ್ವೇನಿಯಾ ಅವೆನ್ಯೂ ಮೂಲಕ ತೆರಳುತ್ತಿದ್ದಾಗ ಟ್ರಂಪ್ ಅವರಿದ್ದ ಕಾರು ಬೆಂಬಲಿಗರ ನಡುವೆಯೇ ಹಾದುಹೋಯಿತು.

ವಿರೋಧಿ ಪ್ರತಿಭಟನಕಾರರ ವಿರುದ್ಧ ಗುಡುಗಿದ ಟ್ರಂಪ್

 ತನಗೆ ಬೆಂಬಲ ವ್ಯಕ್ತಪಡಿಸಿ ವಾಶಿಂಗ್ಟನ್‌ನಲ್ಲಿ ನಡೆದ ಬೃಹತ್ ರ್ಯಾಲಿಯನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿಲ್ಲವೆಂದು ಆಪಾದಿಸಿದ್ದಾರೆ ಹಾಗೂ ಎಂಎಜಿಎ ರ್ಯಾಲಿಯ ಚಿತ್ರವೊಂದನ್ನು ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಟ್ರಂಪ್‌ ತನ್ನ ವಿರೋಧಿ ಪ್ರತಿಭಟನಕಾರರ ವಿರುದ್ಧ ಟ್ವೀಟ್ ಮಾಡಿದ್ದಾರೆ. ಲಕ್ಷಾಂತರ ಮಂದಿ ಎಂಎಜಿಎ ಪ್ರತಿಭಟನಕಾರರ ವಿರುದ್ಧ ದಾಂಧಲೆ ನಡೆಸಿದ ವಿರೋಧಿ ಪ್ರತಿಭಟಕಾರರು ಎಡಪಂಥೀಯ ಕಲ್ಮಶಗಳೆಂದು ಟೀಕಿಸಿದ್ದು, ವಾಶಿಂಗ್ಟನ್‌ನಲ್ಲಿ ಗಲಭೆ ಭುಗಿಲೆದ್ದ ಬಳಿಕ ಅವರು ಗುಡ್ಡಗಳಿಗೆ ಪಲಾಯನ ಮಾಡಿದ್ದಾರೆಂದು ಚಟಾಕಿ ಹಾರಿಸಿದ್ದಾರೆ.

‘‘ ಟ್ರಂಪ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ದಾಳಿ ನಡೆಸಲು ಯತ್ನಿಸಿದ ಎಡಪಂಥೀಯ ಕಲ್ಮಶಗಳು ಇಂದು ಬೆಟ್ಟಗಳಿಗೆ ಪಲಾಯನ ಮಾಡಬೇಕಾಯಿತು. ಯಾಕೆಂದರೆ ಅವರ ವಿರುದ್ಧ ಜನರು ಆಕ್ರಮಣಕಾರಿಯಾಗಿ ಪ್ರತಿ ಹೋರಾಟ ನಡೆಸಿದರು’’ ಎಂದವರು ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News