ಪರ್ಕಳ ಸಮೀಪ ರಸ್ತೆಯೇ ಇಲ್ಲದ ಗದ್ದೆಯಲ್ಲಿ ಪ್ರತ್ಯಕ್ಷವಾದ ಕಾರು !
ಉಡುಪಿ, ನ.15: ಮಣಿಪಾಲ ಸಮೀಪದ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಸಮೀಪದ ರಸ್ತೆ ಇಲ್ಲದ ಗದ್ದೆಯಲ್ಲಿ ಕಳೆದ ಎರಡು ದಿನಗಳಿಂದ ನಿಂತಿದ್ದ ಕಾರೊಂದು ಹಲವು ಅನುಮಾನಕ್ಕೆ ಎಡೆಮಾಡಿದ್ದು, ಇದೀಗ ಅದನ್ನು ಬೇಧಿಸಿರುವ ಪೊಲೀಸರು ಕಾರಿನ ವಾರಸುದಾರರನ್ನು ಪತ್ತೆ ಹಚ್ಚಿದ್ದಾರೆ.
ಕೇರಳ ತಿರುವನಂತಪುರ ನೋಂದಣಿಯ ಕಾರು, ಯಾವುದೇ ರೀತಿಯಲ್ಲಿ ಹಾನಿಯಾಗದೆ ರಸ್ತೆ ಸಂಪರ್ಕ ಇಲ್ಲದ ಗದ್ದೆಯಲ್ಲಿ ಕಳೆದ ಎರಡು ದಿನಗಳಿಂದ ನಿಗೂಢ ರೀತಿಯಲ್ಲಿ ನಿಂತಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಅಪರಾಧ ಕೃತ್ಯ ಸೇರಿದಂತೆ ವಿವಿಧ ರೀತಿ ಅನುಮಾನಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು.
ಈ ಬಗ್ಗೆ ಸ್ಥಳಕ್ಕೆ ಆಗಮಿಸಿರುವ ಮಣಿಪಾಲ ಪೊಲೀಸರು, ಈ ಕಾರಿನ ನೋಂದಣಿ ಸಂಖ್ಯೆಯ ಮೂಲಕ ಅದರ ವಾರಸುದಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ‘ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ಕೇರಳ ಮೂಲದ ಮಣಿಪಾಲ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ರಿವರ್ಸ್ ತೆಗೆಯುವಾಗ ಕಾರು ನಿಯಂತ್ರಣ ತಪ್ಪಿ ಗದ್ದೆಗೆ ಚಲಿಸಿಕೊಂಡು ಹೋಗಿದೆ. ಇದೀಗ ಅವರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಿಂದ ಈ ಕಾರು ಆತನದ್ದೆ ಎಂಬುದು ದೃಢಪಟ್ಟಿದೆ ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.
ಮಣಿಪಾಲದಿಂದ ಆ ರಸ್ತೆಯಲ್ಲಿ ಹೋಗುತ್ತಿದ್ದಾಗ ವಿದ್ಯಾರ್ಥಿ, ಮಣಿಪಾಲದಲ್ಲಿ ವಸ್ತುವೊಂದನ್ನು ಬಿಟ್ಟು ಬಂದಿರುವುದು ನೆನಪಿಗೆ ಬಂದಿದೆ. ಅದಕ್ಕೆ ಆತನ
ಕೆಳಪರ್ಕಳ ದೇವಸ್ಥಾನದ ಬಳಿ, ವಾಪಸ್ ಮಣಿಪಾಲಕ್ಕೆ ಹೋಗಲು ಕಾರನ್ನು ರಿವರ್ಸ್ ತೆಗೆಯುವ ಪ್ರಯತ್ನ ಮಾಡಿದ್ದಾನೆ. ಆದರೆ ರಾತ್ರಿ ಕತ್ತಲಿನಲ್ಲಿ ರಸ್ತೆ ಕಾಣದೆ ಕಾರು ಗದ್ದೆಗೆ ಇಳಿದಿದೆ. ಆದರೆ ಆತ ಪರೀಕ್ಷೆ ಒತ್ತಡದಲ್ಲಿದ್ದುದರಿಂದ ಕಾರನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಕಾರನ್ನು ಕ್ರೇನ್ ಸಹಾಯದಿಂದ ಮೇಲೆತ್ತಿ ತೆಗೆದುಕೊಂಡು ಹೋಗುವ ಯೋಜನೆ ಹಾಕಿದ್ದನು. ಈ ಮಧ್ಯೆ ನಿಗೂಢವಾಗಿ ಕಾಣಿಸಿಕೊಂಡ ಕಾರಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ವಿದ್ಯಾರ್ಥಿ ಇಂದು ಸಂಜೆ ಇಲ್ಲವೇ ನಾಳೆ ಬೆಳಗ್ಗೆ ಕಾರನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.