×
Ad

ಉಡುಪಿ: ಸಿನೆಮಾದಿಂದ ಪ್ರೇರಿತನಾಗಿ ಕಷ್ಟ ಪರಿಹಾರಕ್ಕೆಂದು ಭಿಕ್ಷೆ ಬೇಡುತ್ತಿದ್ದ ಯುವಕನ ರಕ್ಷಣೆ!

Update: 2020-11-15 16:06 IST

ಉಡುಪಿ ನ.15: ಸಿನೆಮಾವೊಂದರಿಂದ ಪ್ರೇರಿತನಾಗಿ 48 ದಿನಗಳ ಕಾಲ ಭಿಕ್ಷೆ ಬೇಡಿ ತಿಂದರೆ ಕಷ್ಟ ಪರಿಹಾರ ಆಗುವುದೆಂದು ನಂಬಿ ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನೊಬ್ಬನನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ.

ಚಿತ್ರದುರ್ಗದ ಪದವೀಧರ ಯುವಕನು ಕೆಲಸವಿಲ್ಲದೆ ಮನನೊಂದು ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಿದ್ದನೆನ್ನಲಾಗಿದೆ. ಈ ನಡುವೆ ‘ಅಮ್ಮ ಐ ಲವ್ ಯು’ ಎಂಬ ಸಿನೆಮಾ ನೋಡಿದ ಈತ ಅದರಲ್ಲಿರುವಂತೆ 48 ದಿನಗಳ ಕಾಲ ಭಿಕ್ಷೆ ಬೇಡಿ ತಿಂದರೆ ಕಷ್ಟ ಪರಿಹಾರ ಆಗುವುದೆಂದು ನಂಬಿದ್ದಾನೆ. ಅದರಂತೆ ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದನೆನ್ನಲಾಗಿದೆ.

ಈ ಯುವಕನನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆತ ಗುಣಮುಖನಾಗಿದ್ದಾನೆ.

 ಮಗ ಮನೆ ಬಿಟ್ಟಂದಿನಿಂದ ಹೆತ್ತವರು ಹುಡುಕಾಟದಲ್ಲಿ ನಿರತರಾಗಿದ್ದರು. ಮಗನ ಇರುವಿಕೆಯ ಸುದ್ದಿ ತಿಳಿದ ತಂದೆ ಕೂಡಲೇ ಉಡುಪಿಗೆ ಆಗಮಿಸಿ ಮಗನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ.

‘‘ಈ ವರ್ಷ ಮಗನಿಲ್ಲದೆ ದೀಪಾವಳಿ ಆಚರಣೆ ಇಲ್ಲ ಎಂದು ಎನಿಸಿದ್ದೆವು. ಇದೀಗ ದೀಪಾವಳಿಗೆ ಮಗ ಸಿಕ್ಕಿರುವುದು ಸಂತಸ ತಂದಿದೆ’’ ಎಂದು ಯುವಕನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News