×
Ad

ದ.ಕ. ಜಿಲ್ಲೆಯಲ್ಲೂ ನ.17ರಿಂದ ಅಂತಿಮ ಪದವಿ ತರಗತಿ ಆರಂಭ

Update: 2020-11-15 16:34 IST
ಸಾಂದರ್ಭಿಕ ಚಿತ್ರ

# ಕೊರೋನ ಪರೀಕ್ಷೆ ಮಾಡುವುದೇ ಸಮಸ್ಯೆ!

ಮಂಗಳೂರು, ನ.15: ಕೊರೋನದಿಂದಾಗಿ ಸ್ಥಗಿತವಾಗಿರುವ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳನ್ನು ನ.17ರಿಂದ ಆರಂಭಿಸಲು ರಾಜ್ಯ ಸರಕಾರ ನೀಡಿರುವ ಮುನ್ಸೂಚನೆಯಂತೆ ದ.ಕ. ಜಿಲ್ಲೆಯಲ್ಲೂ ಅಂತಿಮ ಪದವಿ ತರಗತಿಗಳನ್ನು ನಡೆಸಲು ಸಿದ್ಧತೆ ಆರಂಭಗೊಂಡಿದೆ. ಆದರೆ ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಕೊರೋನ ಟೆಸ್ಟ್‌ನ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ, ಸಮಸ್ಯೆ ಸೃಷ್ಟಿಸಿದೆ.

ಸರಕಾರದ ಮಾರ್ಗಸೂಚಿಯಂತೆ ನ.17ರಿಂದ ಸ್ನಾತಕೋತ್ತರ ಹಾಗೂ ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗುವುದಿದ್ದಲ್ಲಿ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರ ತರತಕ್ಕದ್ದು. ಜತೆಯಲ್ಲೇ ಕೊರೋನ ಟೆಸ್ಟ್ ನೆಗೆಟಿವ್ ಪ್ರಮಾಣ ಪತ್ರವನ್ನೂ ಹೊಂದಿರಬೇಕು. ಆದರೆ ಕೊರೋನ ಟೆಸ್ಟ್‌ನ ಫಲಿತಾಂಶದ ವರದಿ ಬರಲು ಕನಿಷ್ಠ 48 ಗಂಟೆಗಳ ಅವಧಿಯಾದರೂ ಬೇಕಾಗುತ್ತದೆ. ಆದರೆ ದೀಪಾವಳಿ ಹಬ್ಬದ ರಜೆಯ ನಡುವೆ ಇನ್ನೇನು ಒಂದೆರಡು ದಿನಗಳು ಮಾತ್ರವೇ ಉಳಿದಿರುವುದರಿಂದ ಸರಕಾರದ ಆದೇಶ ವಿದ್ಯಾರ್ಥಿಗಳ ಪೋಷಕರನ್ನು ಗೊಂದಲಕ್ಕೀಡುಮಾಡಿದೆ. ಆದರೆ, ಈ ಬಗ್ಗೆ ಚಿಂತೆ ಅನಗತ್ಯ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ತಪಾಸಣೆಗೆ ಸಂಬಂಧಿಸಿ ಎಲ್ಲ ರೀತಿಯ ನಿರ್ದೇಶನಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈಗಾಗಲೇ ಸರಕಾರ ಸೂಚಿಸಿರುವ ದಿನಾಂಕದಂದೇ ಕಾಲೇಜು ಆರಂಭಿಸಲು ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ಮುನ್ಸೂಚನೆ ನೀಡಲಾಗಿದೆ. ಕೋವಿಡ್ ಸಂಬಂಧಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲು, ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಅವರೂ ಹೇಳಿದ್ದಾರೆ.

ಮಂಗಳೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಈಗಾಗಲೇ ಸರಕಾರದ ಮಾರ್ಗಸೂಚಿಯನ್ನು ತಿಳಿಸಲಾಗಿದ್ದು, ಕಾಲೇಜಿನವರು ಜವಾಬ್ದಾರಿಯನ್ನು ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪಾಠ ಮುಂದುವರಿಸುವ ಆಯ್ಕೆಯೂ ಇರಲಿದೆ. ತರಗತಿಯಲ್ಲಿ ಪಾಠ ಮಾಡುವುದನ್ನು ಲೈವ್ ಸ್ಕ್ರೀಮಿಂಗ್ ಮಾಡಬೇಕಾಗುತ್ತದೆ. ಆರಂಭದ ದಿನಗಳಲ್ಲಿ ಅದು ಕಷ್ಟವಾದಲ್ಲಿ ಪಾಠವನ್ನು ರೆಕಾರ್ಡ್ ಮಾಡಿ ವೆಬ್‌ಸೈಟ್ ಮಾಡಿ ಕಾಲೇಜಿಗೆ ಬರಲಾಗದ ಮಕ್ಕಳು ಅವರ ಸಮಯದಲ್ಲಿ ಪಾಠವನ್ನು ಅಭ್ಯಸಿಸಬಹುದು. 17ರೊಳಗೆ ಕಾಲೇಜು ಸ್ಯಾನಿಟೈಸೇಶನ್‌ಗೊಂಡಿರಬೇಕು. ವಾಶ್‌ರೂಂಗಳಲ್ಲಿ ಲಿಕ್ವಿಡ್ ಸೋಪ್‌ನ ವ್ಯವಸ್ಥೆ ಮಾಡಿರಬೇಕು. ಸ್ಯಾನಿಟೈಸರ್ ಜತೆಗೆ ಥರ್ಮಲ್ ಸ್ಕಾನಿಂಗ್ ವ್ಯವಸ್ಥೆ ಮಾಡಿರಬೇಕು ಎಂದು ಡಾ.ಪಿ.ಎಸ್. ಯಡಪಡಿತ್ತಾಯ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

‘‘ದ.ಕ. ಜಿಲ್ಲೆಯ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಲ್ಲ್ಲ ಕಡೆೆ ಆರ್‌ಟಿಪಿಸಿಆರ್ ತಪಾಸಣೆಗೆ ನಮ್ಮಲ್ಲಿ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ತಮ್ಮ ಮನೆ ಸಮೀಪದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಾಬ್ ನೀಡಿ ತಪಾಸಣೆ ಮಾಡಬಹುದು. ಕೊರೋನ ತಪಾಸಣೆಯ ಫಲಿತಾಂಶ 48 ಗಂಟೆಗಳಲ್ಲಿ ಲಭಿಸುತ್ತದೆ. ಆದರೆ ತುಂಬಾ ಮಂದಿಯ ತಪಾಸಣೆಯ ಸಂದರ್ಭ ಒಂದೆರಡು ದಿನ ವಿಳಂಬವಾಗಬಹುದು. ಆದರೆ ಆ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಎಲ್ಲ ಪದವಿ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೂ ಈ ಮಾಹಿತಿ ನೀಡಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ನ.14ರಂದು ಬಂದಿದೆ. ಹಾಗಾಗಿ ಹಂತ ಹಂತವಾಗಿ ಇದು ಸಾಗಲಿದೆ. ಕಾಲೇಜಿಗಿಂತಲೂ ಮುಖ್ಯವಾಗಿ ಇದೀಗ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆ ಮೊದಲಾದ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕಿದೆ. ಸ್ವಲ್ಪ ತೊಂದರೆ ಆಗಬಹುದು. ಆದರೆ ಅವೆಲ್ಲವನ್ನೂ ನಿಭಾಯಿಸಿಕೊಂಡು ಕಾಲೇಜು ಆರಂಭಿಸಲು ದ.ಕ. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.


ಆರಂಭ ದಿನವೇ ಕಾಲೇಜಿಗೆ ಹಾಜರಾಗಲು ಕಡ್ಡಾಯವಿಲ್ಲ
‘‘ಸರಕಾರ ನಿರ್ದೇಶನದಂತೆ ನ.17ರಿಂದ ಅಂತಿಮ ಪದವಿ ತರಗತಿಗಳನ್ನು ಆರಂಭಿಸಲು ಕಾಲೇಜು ಕ್ರಮ ವಹಿಸಲಿದೆ. ಕೋವಿಡ್-19ರ ಮುಂಜಾಗೃತಾ ಕ್ರಮಗಳನ್ನು ಕಾಲೇಜುಗಳು ಚಾಚೂ ತಪ್ಪದೆ ಪಾಲಿಸಬೇಕಿದೆ. ವಿದ್ಯಾರ್ಥಿಗಳು, ಸಿಬ್ಬಂದಿ, ಶಿಕ್ಷಕರು ಕೋವಿಡ್ ತಪಾಸಣಾ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ತರಗತಿಯಲ್ಲಿ 60 ಮಕ್ಕಳಿದ್ದಲ್ಲಿ ಎರಡು ಪಾಳಿಯಲ್ಲಿ ತರಗತಿ ನಡೆಸಬೇಕು. ಕೊರೋನ ಪರೀಕ್ಷೆ ಈಗಾಗಲೇ ಆಗಿದ್ದು, ವರದಿ ನೆಗೆಟಿವ್ ಇರುವ ಮಕ್ಕಳಿಗೆ ನ. 17ರಿಂದ ತರಗತಿ ಆರಂಭಗೊಳ್ಳಲಿದೆ. ಆದರೆ ಅಂದೇ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಭೌತಿಕವಾಗಿ ಹಾಜರಾಗಲು ಕಡ್ಡಾಯವಿಲ್ಲ. ತಮ್ಮ ಕೊರೋನ ತಪಾಸಣಾ ವರದಿ ಬರುವವರೆಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದು ಆನ್‌ಲೈನ್ ಪಾಠವನ್ನೂ ಮುಂದುವರಿಸಬಹುದು.’’

* ಡಾ. ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ.


ಆತಂಕ, ಗೊಂದಲ ಬೇಡ
ಸ್ಥಳೀಯವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ರ್ಯಾಪಿಡ್ ಆರ್‌ಟಿಪಿಸಿಆರ್ ಸ್ವಾಬ್ ಸಂಗ್ರಹ ಕೇಂದ್ರಗಳಿವೆ. ಒಂದೆರಡು ದಿನಗಳಲ್ಲಿ ಈ ತಪಾಸಣೆ ಸ್ವಲ್ಪ ತೊಂದರೆ ಅನ್ನಿಸಬಹುದು. ಆದರೆ ಸರಕಾರದ ನಿರ್ದೇಶನಗಳನ್ನು ಪಾಲಿಸಲು ಪ್ರಯತ್ನಿಸಲಾಗುತ್ತದೆ. ನ.17ರಿಂದಲೇ ಪೂರ್ಣ ಪ್ರಮಾಣದಲ್ಲಿ ಕಾಲೇಜುಗಳಲ್ಲಿ ತರಗತಿ ಆರಂಭ ಆಗದಿರಬಹುದು. ಹಂತ ಹಂತವಾಗಿ ಕಾಲೇಜಿಗೆ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಲಿದ್ದಾರೆ. ಹಾಗಾಗಿ ಪೋಷಕರು, ವಿದ್ಯಾರ್ಥಿಗಳು ಗೊಂದಲ ಅಥವಾ ಆತಂಕ ಪಡುವ ಅಗತ್ಯವಿಲ್ಲ.

-ಡಾ.ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News