ಸಚಿವ ಸೋಮಶೇಖರ ಕೆಎಂಎಫ್‌ಗೆ ಭೇಟಿ

Update: 2020-11-15 14:09 GMT

ಮಂಗಳೂರು, ನ.15: ನಗರ ಹೊರವಲಯದ ಕುಲಶೇಖರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್)ಕ್ಕೆ ರಾಜ್ಯ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ರವಿವಾರ ಭೇಟಿ ನೀಡಿ ಹಾಲು ಸಂಸ್ಕರಣಾ ಘಟಕ ಪರಿಶೀಲಿಸಿ, ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಒಕ್ಕೂಟದ ಜಾಗವು ಲೀಸ್‌ನಲ್ಲಿದ್ದು, ಮಾಲೀಕತ್ವ ಪಡೆಯುವ ಬಗ್ಗೆ ಮತ್ತಿತರ ಕೆಲವು ಪ್ರಮುಖ ವಿಷಯಗಳನ್ನು ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು ಮತ್ತು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ಡೈರಿಯ ಸುಮಾರು 12 ಎಕರೆ ಸರಕಾರಿ ಜಾಗ ಲೀಸ್‌ನಲ್ಲಿದೆ. ಹಿಂದೆ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಪ್ರಸ್ತಾವನೆ ಪಡೆದು, ದಾಖಲೆಗಳನ್ನು ಸಚಿವಾಲಯಕ್ಕೆ ಮುಟ್ಟಿಸಿದ್ದರು. ಕಾರಣಾಂತರಗಳಿಂದ ಅದು ಮುಂದುವರಿಯಲಿಲ್ಲ. ಜಾಗವನ್ನು ಒಕ್ಕೂಟದ ಹೆಸರಿಗೆ ಮಾಡುವಂತೆ ಮನವಿ ಮಾಡಿದರು.

ಜಾಗದ ದಾಖಲೆಗಳನ್ನು ತನಗೆ ತಲುಪಿಸಿ. ತಾನು ಸಚಿವರ ಮೂಲಕ ಸಚಿವ ಸಂಪುಟಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲು ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಈ ಸಂದರ್ಭ ಭರವಸೆ ನೀಡಿದರು.

ಸುಮಾರು 1.5 ಕೋಟಿ ಲೀಟರ್ ಹಾಲು ಹುಡಿಯಾಗಿ ಮಾರ್ಪಾಡು ಮಾಡಲಾಗುತ್ತದೆ. ಇದನ್ನು ಹಾಸನ, ರಾಮನಗರ, ತಮಿಳುನಾಡು, ಮಹಾರಾಷ್ಟ್ರಕ್ಕೆ ಕಳುಹಿಸಿ ಹುಡಿ ಮಾಡುವುದರಿಂದ ಒಕ್ಕೂಟಕ್ಕೆ ಬಹಳಷ್ಟು ಹೊರೆಯಾಗುತ್ತಿದೆ. ಆದ್ದರಿಂದ ಇಲ್ಲಿಯೇ ಹುಡಿ ಮಾಡುವ ಘಟಕ ಸ್ಥಾಪಿಸಲು ಒಪ್ಪಿಗೆ ಸೂಚಿಸಿ, ಆರ್ಥಿಕ ನೆರವು ನೀಡಬೇಕು ಎಂದು ಸಚಿವರ ಬಳಿ ಕೆಎಂಎಫ್ ಅಧ್ಯಕ್ಷರು ಮನವಿ ಮಾಡಿದರು.

ಹಾಲು ಉತ್ಪಾದಕರ ಸಂಘದ ಕಟ್ಟಡ ಕಟ್ಟಲು ಕನಿಷ್ಟ 10 ಸೆಂಟ್ಸ್ ಜಾಗದ ಅಗತ್ಯವಿದೆ. ಜಾಗ ಮಂಜೂರಾತಿಗೆ ಸರಕಾರಕ್ಕೆ ಹೋಗುವ ಬದಲು, ಜಿಲ್ಲಾಧಿಕಾರಿ ಹಂತದಲ್ಲೇ ಮಾಡಬೇಕು. ಗೋಮಾಳಗಳನ್ನು ಸಂಘಗಳಿಗೆ ಕೊಟ್ಟು ಸದುಪಯೋಗ ಮಾಡಿಸಬೇಕು. ಈಗಾಗಲೇ ದಾಸ್ತಾನು ಇರುವ ಹಾಲಿನ ಹುಡಿ ಮತ್ತು ಬೆಣ್ಣೆ ವಿಲೇವಾರಿಗೆ ಕ್ರಮ ಕೈಗೊಂಡು ಒಕ್ಕೂಟದ ಸಂಕಷ್ಟಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದ ಕೆಎಂಎಫ್ ಅಧ್ಯಕ್ಷರು ಒಕ್ಕೂಟದ ಸಿಬ್ಬಂದಿ ನೇಮಕಕ್ಕೆ ಸಚಿವರು ಅನುಮೋದನೆ ನೀಡಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News