ಪಾಕಿಸ್ತಾನ ಸೇನೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಬಗ್ಗೆ ಪ್ರಶ್ನಿಸಬೇಕು: ಬಿಎಸ್‌ಎಫ್

Update: 2020-11-15 15:02 GMT

ಜಮ್ಮು-ಕಾಶ್ಮೀರ, ನ. 15: ಪಾಕಿಸ್ತಾನ ಸೇನೆ ಇತ್ತೀಚೆಗೆ ಕದನ ವಿರಾಮ ಉಲ್ಲಂಘಿಸುವ ಮೂಲಕ ನಾಗರಿಕರ ಪ್ರಾಣ ಹಾಗೂ ಸೊತ್ತಿಗೆ ಹಾನಿ ಉಂಟು ಮಾಡಿದೆ ಎಂದು ಕಾಶ್ಮೀರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಐಜಿ ರಾಜೇಶ್ ಮಿಶ್ರಾ ರವಿವಾರ ಹೇಳಿದ್ದಾರೆ.

ನವೆಂಬರ್ 13ರಂದು ಪಾಕಿಸ್ತಾನ ಸೇನೆ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಯಾವುದಾದರೂ ಸಂದೇಶ ನೀಡಲು ಬಯಸುತ್ತೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ, ‘‘ಪಾಕಿಸ್ತಾನ ಸೇನೆ ನಾಗರಿಕರ ಪ್ರಾಣ, ಸೊತ್ತಿಗೆ ಹಾನಿ ಉಂಟು ಮಾಡಿದೆ. ಅದು ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಬಗ್ಗೆ ಪ್ರಶ್ನೆ ಎತ್ತಬೇಕು’’ ಎಂದರು.

 ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ ಪರಿಣಾಮ ಹುತಾತ್ಮರಾದ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ರಾಕೇಶ್ ದೋವಲ್ ಅವರಿಗೆ ಬಾರಮುಲ್ಲಾ ಜಿಲ್ಲೆಯಲ್ಲಿ ಬಿಎಸ್‌ಎಫ್ ಶುಕ್ರವಾರ ನಡೆಸಿದ ಗೌರವ ವಂದನೆ ಕಾರ್ಯಕ್ರಮದ ನೇಪಥ್ಯದಲ್ಲಿ ಮಿಶ್ರಾ ಮಾತನಾಡಿದರು.

 ಪಾಕಿಸ್ತಾನ ಸೇನೆಯಿಂದ ಪಿರಂಗಿ ಬಳಕೆ: ಜಮ್ಮು ಹಾಗೂ ಕಾಶ್ಮೀರದ ಹಲವು ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿದ ಸಂದರ್ಭ ಪಾಕಿಸ್ತಾನ ಸೇನೆ ಭಾರೀ ಪಿರಂಗಿಗಳನ್ನು ಬಳಿಸಿದ್ದು, ಭಾರತದ ಭಾಗದಲ್ಲಿ ಜೀವ ಹಾಗೂ ದೊಡ್ಡ ಪ್ರಮಾಣದ ಸೊತ್ತಿಗೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ‘‘ಯಾವುದೇ ಪ್ರಚೋದನೆ ಇಲ್ಲದೆ, ಪಾಕಿಸ್ತಾನ ಸೇನೆ ಭಾರೀ ಫಿರಂಗಿಗಳನ್ನು ಬಳಸಿತು. ಆದರೆ, ಸೇನೆ ಹಾಗೂ ಬಿಎಸ್‌ಎಫ್ ಶೌರ್ಯದಿಂದ ಹೋರಾಡಿತು ಹಾಗೂ ಸೂಕ್ತ ಪ್ರತ್ಯುತ್ತರ ನೀಡಿತು. ಇದರಿಂದ ಪಾಕಿಸ್ತಾನದ ಹಲವು ರಕ್ಷಣಾ ಸ್ಥಾವರಗಳು ನಾಶವಾದವು’’ ಎಂದು ಮಿಶ್ರಾ ಹೇಳಿದ್ದಾರೆ. ಪಾಕಿಸ್ತಾನ ಸೇನೆಯ ದಾಳಿಯನ್ನು ಬಿಎಸ್‌ಎಫ್ ಸಹಿತ ಭದ್ರತಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿದೆ. ಇದನ್ನು ಮುಂದುವರಿಸಲಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News