ಐದು ತಿಂಗಳ ಹರಸಾಹಸ ಬಳಿಕ ಅಸ್ಸಾಂ ತೈಲ ಬಾವಿಯ ಬೆಂಕಿ ಆರಿಸಿದ ಸಿಬ್ಬಂದಿ
ಗುವಾಹತಿ : ಅಸ್ಸಾಂನ ತೀನ್‌ಸುಕಿಯಾ ಜಿಲ್ಲೆಯ ಬಾಗ್‌ಜಾನ್ ತೈಲ ಕ್ಷೇತ್ರದ 5ನೇ ಬಾವಿಯಲ್ಲಿ 173 ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿಯನ್ನು ಸಂಪೂರ್ಣವಾಗಿ ಆರಿಸುವಲ್ಲಿ ತಜ್ಞರು ಯಶಸ್ವಿಯಾಗಿದ್ದಾರೆ.
"ಬಾಗ್‌ಜಾಜ್ ಬೆಂಕಿಯನ್ನು ಯಶಸ್ವಿಯಾಗಿ ಆರಿಸಲಾಗಿದೆ. ಬ್ರೈನ್ ಸೊಲ್ಯೂಶನ್ ಮೂಲಕ ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ" ಎಂದು ಆಯಿಲ್ ಇಂಡಿಯಾ ಲಿಮಿಟೆಡ್ ಟ್ವೀಟ್ ಮಾಡಿದೆ. ಇದೀಗ ಬಾವಿಯಲ್ಲಿ ಯಾವುದೇ ಒತ್ತಡ ಇಲ್ಲ ಹಾಗೂ ಅನಿಲ ಹೊರಸೂಸುವಿಕೆ ಮತ್ತು ಒತ್ತಡ ರೂಪುಗೊಳ್ಳುವುದನ್ನು ಪರಿಶೀಲಿಸಲು ಮುಂದಿನ 24 ಗಂಟೆ ಕಾಲ ಸಂಪೂರ್ಣ ನಿಗಾ ಇಡಲಾಗುವುದು ಎಂದು ಒಐಎಲ್ ಸ್ಪಷ್ಟಪಡಿಸಿದೆ.
ಈ ತೈಲ ಬಾವಿಯನ್ನು ನಿಷ್ಕ್ರಿಯಗೊಳಿಸಲು ತಜ್ಞರ ತಂಡ ಕೃತಕ ಕೆಸರನ್ನು ಅತ್ಯಧಿಕ ಒತ್ತಡದಲ್ಲಿ ಬಾವಿಗೆ ಸುರಿಸಿದೆ. ಎಂಟು ಮಂದಿ ವಿದೇಶಿ ತಜ್ಞರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಓಐಎಲ್‌ನ ವಿಕೋಪ ನಿರ್ವಹಣಾ ತಂಡ ಸಹಕರಿಸಿತ್ತು. ಓಐಎಲ್ ಇದಕ್ಕಾಗಿ 60 ಟನ್ ಸಾಧನಗಳನ್ನು ಈ ವಿಶೇಷ ಕಾರ್ಯಾಚರಣೆಗಾಗಿ ಕೆನಡಾದಿಂದ ಆಮದು ಮಾಡಿಕೊಂಡಿತ್ತು.
ಈ ತೈಲಬಾವಿಯನ್ನು ರದ್ದುಪಡಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ ಎಂದು ಹಜಾರಿಕಾ ಹೇಳಿದ್ದಾರೆ. ಸಿಂಗಾಪುರದ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಸಂಸ್ಥೆಯ ತಜ್ಞರು ಬಾವಿಯನ್ನು ನಿಯಂತ್ರಿಸುವ ಅಂತಿಮ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ತೈಲ ಬಾವಿಯಲ್ಲಿ ಮೇ 27ರಿಂದೀಚೆಗೆ ಅನಿಯಂತ್ರಿತವಾಗಿ ಅನಿಲ ಹೊರಬರುತ್ತಿದ್ದು, ಜೂನ್ 9ರಂದು ಬೆಂಕಿ ಹತ್ತಿಕೊಂಡಿತ್ತು. ಈ ದುರಂತದಲ್ಲಿ ಒಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಜೀವಂತ ದಹನವಾಗಿದ್ದರು. ಈ ತೈಲಕ್ಷೇತ್ರದಲ್ಲಿ ಇಂಥ 20 ಬಾವಿಗಳಿವೆ.