×
Ad

"ನನ್ನ ಪತಿ ಈ ದೇಶದ ನಾಗರಿಕನಲ್ಲವೇ?, ನ್ಯಾಯ ಎಲ್ಲರಿಗೂ ಸಮಾನವಲ್ಲವೇ?"

Update: 2020-11-16 12:10 IST

ತಿರುವನಂತಪುರಂ : ನನ್ನ ಪತಿ ಈ ದೇಶದ ನಾಗರಿಕನಲ್ಲವೇ? ಎಂದು ಹತ್ರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲೆಂದು ತೆರಳುತ್ತಿದ್ದ ವೇಳೆ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿ ಈಗ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಪ್ರಕರಣ ಹಾಗೂ ದೇಶದ್ರೋಹ ಆರೋಪ ಎದುರಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಪತ್ನಿ ರೈಹಾನ ಸುಪ್ರೀಂ ಕೋರ್ಟ್ ಅನ್ನು ಪ್ರಶ್ನಿಸಿದ್ದಾರೆ.

"ನ್ಯಾಯಾಂಗ ಕೂಡ ನಮ್ಮನ್ನು ಕೈಬಿಟ್ಟಿದೆ ಎಂದು ನನಗನಿಸುತ್ತದೆ. ನ್ಯಾಯ ಎಲ್ಲರಿಗೂ ಸಮನಾಗಿಲ್ಲ. ನ್ಯಾಯ ಎಲ್ಲರಿಗೂ ಅಲ್ಲ, ಕೆಲವರಿಗೆ ಮಾತ್ರ. ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ಎಲ್ಲವೂ ಅದೆಷ್ಟು ಬೇಗ ಮುಂದುವರಿಯಿತು?,'' ಎಂದು ಅವರು ಪ್ರಶ್ನಿಸಿದ್ದಾರೆ.

ಆರ್ಕಿಟೆಕ್ಟ್ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾದ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಪ್ರಕರಣವನ್ನು ಉಲ್ಲೇಖಿಸಿ ರೈಹಾನ ಮೇಲಿನ ಪ್ರಶ್ನೆಯನ್ನೆತ್ತಿದ್ದಾರೆ. ಸಿದ್ಧೀಖ್ ಕಪ್ಪನ್ ಅವರು ಈಗಾಗಲೇ 41 ದಿನಗಳಿಗೂ  ಹೆಚ್ಚು ಸಮಯದಿಂದ ಜೈಲಿನಲ್ಲಿದ್ದು ಅವರಿಗೆ ಸುಪ್ರೀಂ ಕೋರ್ಟ್ ಇನ್ನೂ ಜಾಮೀನು ಒದಗಿಸಿಲ್ಲ. ಆವರ ಅಪೀಲಿನ ಮೇಲಿನ ವಿಚಾರಣೆಯನ್ನು  ನಾಲ್ಕು ವಾರಗಳ ನಂತರಕ್ಕೆ ನಿಗದಿ ಪಡಿಸಲಾಗಿರುವುದು ರೈಹಾನ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಅರ್ನಬ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ಕೆಳಗಿನ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಸುವಂತೆ ಹೇಳಿದ್ದರೂ ಸುಪ್ರೀಂ ಕೋರ್ಟ್ ಅವರ ಕೋರಿಕೆಯನ್ನು ಮನ್ನಿಸಿ ಅವರಿಗೆ ಜಾಮೀನು ನೀಡಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರದ ವಕೀಲರಾಗಿದ್ದ ಕಪಿಲ್ ಸಿಬಲ್ ತಮ್ಮ ವಾದ ಮಂಡನೆ ವೇಳೆ ಸಿದ್ಧೀಖ್ ಕಪ್ಪನ್ ಪ್ರಕರಣವನ್ನೂ ಉಲ್ಲೇಖಿಸಿ ಅವರಿಗೆ ಜಾಮೀನು ದೊರೆಯಲು ಆಗುತ್ತಿರುವ ವಿಳಂಬವನ್ನು ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News