ಕಾಂಗ್ರೆಸನ್ನು ಪರ್ಯಾಯ ಎಂದು ಜನರು ಪರಿಗಣಿಸುವುದಿಲ್ಲ: ಪಕ್ಷದ ವಿರುದ್ಧ ಕಪಿಲ್ ಸಿಬಲ್ ಅಸಮಾಧಾನ

Update: 2020-11-16 08:33 GMT

ಹೊಸದಿಲ್ಲಿ: “ಜನರು ಕಾಂಗ್ರೆಸ್ ಪಕ್ಷವನ್ನು ಒಂದು ಪರ್ಯಾಯ ಎಂದು ಪರಿಗಣಿಸುವುದಿಲ್ಲ'' ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ನಿರ್ವಹಣೆ ಬೆನ್ನಲ್ಲಿ ಅವರ ಈ ಹೇಳಿಕೆ ಬಂದಿದೆ. ಪಕ್ಷದ ಸಮಸ್ಯೆಗಳ ಬಗ್ಗೆ ನಾಯಕತ್ವಕ್ಕೆ ಅರಿವಿದ್ದರೂ ಅದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ ಎಂದ ಸಿಬಲ್ ಇದೇ ರೀತಿ ಮುಂದುವರಿದರೆ ಪಕ್ಷದ ಪ್ರಗತಿ ಕುಂಠಿತಗೊಳ್ಳುತ್ತಾ ಹೋಗಲಿದೆ ಎಂದರು.

ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಹೊರತಾಗಿಯೂ ಕೇವಲ 19ರಲ್ಲಿ ಜಯ ಗಳಿಸಿದೆ ಹಾಗೂ ಗುಜರಾತ್ ಉಪಚುನಾವಣೆಗಳಲ್ಲೂ ಸೋಲುಂಡಿದೆ ಎಂದು ಸಿಬಲ್ ಹೇಳಿದರು.

“ಲೋಕಸಭಾ ಚುನಾವಣೆಯಲ್ಲೂ ಗುಜರಾತ್ ‍ನಲ್ಲಿ ಒಂದೇ ಒಂದು ಸ್ಥಾನವನ್ನು ನಾವು ಗಳಿಸಿಲ್ಲ. ಉತ್ತರ ಪ್ರದೇಶದ ಕೆಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಶೇ 2ಕ್ಕಿಂತ ಕಡಿಮೆ ಮತಗಳು ದೊರಕಿವೆ. ಗುಜರಾತ್‍ನಲ್ಲಿ ಮೂವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ''ಎಂದು ಸಿಬಲ್ ಅಸಮಾಧಾನ ವ್ಯಕ್ತಪಡಿಸಿದರು.

ಆಗಸ್ಟ್ ತಿಂಗಳಲ್ಲಿ ಸಿಬಲ್ ಸಹಿತ ಪಕ್ಷದ ಕೆಲ ಹಿರಿಯ ನಾಯಕರು ಪಕ್ಷ ಅವನತಿಯ ಹಾದಿ ಹಿಡಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಬರೆದ ಪತ್ರದ ಕುರಿತು ಉಲ್ಲೇಖಿಸಿದ ಅವರು ಆ ಕುರಿತೂ ಚರ್ಚೆಯಿಲ್ಲ ಹಾಗೂ ನಾಯಕತ್ವ ಕೂಡ ಚರ್ಚೆಗೆ ಪ್ರಯತ್ನಿಸುತ್ತಿಲ್ಲ ಎಂದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲರನ್ನೂ ನಾಮಕರಣಗೊಳಿಸಲಾಗುತ್ತಿರುವ ಕುರಿತು ಮಾತನಾಡಿದ ಅವರು, “ಸಿಡಬ್ಲ್ಯುಸಿ ವಿಚಾರದಲ್ಲೂ ಪ್ರಜಾಪ್ರಭುತ್ವ ಪ್ರಕ್ರಿಯೆ ಅನುಸರಿಸಬೇಕು'' ಎಂದರು. ಪಕ್ಷಕ್ಕೆ ಸಮಸ್ಯೆಗಳ ಬಗ್ಗೆ ಅರಿವಿದೆ. ಆದರೆ ಅವುಗಳ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News