​ಸರಕಾರಿ ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಮೀನನ್ನು ಹಿಂತೆಗೆಯದಂತೆ ಸಿಪಿಎಂ ಆಗ್ರಹ

Update: 2020-11-16 11:56 GMT

ಮಂಗಳೂರು, ನ.16: ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ 40 ಎಕರೆ ಸರಕಾರಿ ಜಮೀನನ್ನು ಕಾದಿರಿಸಿದ್ದು, ಅದನ್ನೀಗ ಮೀನು ಸಂಸ್ಕರಣೆಗೆ ಸಂಬಂಧಿಸಿದ ಉದ್ದಿಮೆಗೆ ಬದಲಾವಣೆ ಮಾಡಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಯಾವ ಕಾರಣಕ್ಕೂ ರಾಜ್ಯ ಸರಕಾರ ಈ ಜಮೀನನ್ನು ವಾಪಸ್ ಪಡೆಯಬಾರದು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.

ದ.ಕ.ಜಿಲ್ಲೆಯಲ್ಲಿ 8 ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ಸರಕಾರ ತನ್ನದೇ ಆದ ಮೆಡಿಕಲ್ ಕಾಲೇಜು ಸ್ಥಾಪಿಸದಿರುವುದು ಖೇದಕರ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಮಧ್ಯೆಯೇ ಸರಕಾರಿ ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಮೀನನ್ನು ಬೇರೆ ಉದ್ಯಮಕ್ಕೆ ವರ್ಗಾಯಿಸಲು ಮುಂದಾಗಿರುವುದು ಖಂಡನೀಯ, ಜಿಲ್ಲೆಯಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜುಗಳಿದ್ದು, ಮತ್ತೆ ಸರಕಾರಿ ಕಾಲೇಜು ಯಾಕೆ ಎಂದು ಶಾಸಕರು ವಾದ ಮಂಡಿಸುತ್ತಿರುವುದು ಹಾಸ್ಯಾಸ್ಪದ ಎಂದು ಸಿಪಿಎಂ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News