×
Ad

ತೊಕ್ಕೊಟ್ಟು: ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ

Update: 2020-11-16 19:51 IST

ಉಳ್ಳಾಲ: ತೊಕ್ಕೊಟ್ಟು ಸಮೀಪದ ಪಂಡಿತ್ ಹೌಸ್ ನಲ್ಲಿರುವ ಶಿಥಿಲಗೊಂಡಿರುವ ಹಳೆಯ ವಸತಿ ಮತ್ತು ವಾಣಿಜ್ಯ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ಬೆಂಕಿ ಅವಘಡ ನಡೆದಿದ್ದು, ಮನೆಯಲ್ಲಿದ್ದ ಒಂಟಿ ಮಹಿಳೆಯ ನಗ, ನಗದು, ಬಟ್ಟೆಬರೆಗಳು ಸುಟ್ಟು ಕರಕಲಾಗಿವೆ. 

ವಿದ್ಯಾ ಶೆಟ್ಟಿ ಎಂಬ ಒಂಟಿ ಮಹಿಳೆ ಕಳೆದ ಎಂಟು ವರ್ಷಗಳಿಂದ ಪಂಡಿತ್ ಹೌಸ್ ವಿಜಯಾ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆನ್ನಲಾಗಿದೆ. ವಿದ್ಯಾ ಅವರು ನಗರದ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಇಂದು ಬೆಳಗ್ಗೆ ಎಂದಿನಂತೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ಹೊತ್ತಿಗೆ ಮನೆಯೊಳಗೆ ಬೆಂಕಿ ಅವಘಡ ನಡೆದಿದ್ದು, ಶಾರ್ಟ್ ಸರ್ಕ್ಯುಟ್ ನಿಂದ ಅನಾಹುತ ನಡೆದಿರುವುದಾಗಿ ಶಂಕಿಸಲಾಗಿದೆ.

ಅಗ್ನಿ ಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ವಿದ್ಯಾ ಅವರ ಮನೆಯೊಳಗಿಟ್ಟಿದ್ದ 12,000 ರೂ. ನಗದು ಸುಟ್ಟು ಹೋಗಿದ್ದು, ಚಿನ್ನದ ಸರ, ಎರಡು ಉಂಗುರಗಳು ನಾಪತ್ತೆಯಾಗಿವೆ. ಮನೆಯೊಳಗಿನ ಕಪಾಟು, ಮಂಚ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News