ತಬ್ಲೀಗಿ ಜಮಾತ್ ಕುರಿತ ಮಾಧ್ಯಮ ವರದಿಗಳ ಕುರಿತ ಕೇಂದ್ರದ ಅಫಿಡವಿಟ್ ಬಗ್ಗೆ ಸುಪ್ರೀಂ ಅಸಮಾಧಾನ

Update: 2020-11-17 10:43 GMT

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ಭಾರತದಲ್ಲಿ ಆರಂಭಗೊಂಡ ಸಂದರ್ಭ ರಾಜಧಾನಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮದ ಕುರಿತಂತೆ ಮಾಧ್ಯಮಗಳು ಮಾಡಿದ್ದ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಸಲ್ಲಿಸಿದ್ದ ಅಫಿಡವಿಟ್ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಟಿವಿಯಲ್ಲಿ ಇಂತಹ ವರದಿಗಳ ಪ್ರಸಾರ ನಿಯಂತ್ರಿಸುವ ಉದ್ದೇಶ ಹೊಂದಿರುವ ನಿಯಂತ್ರಣಾ ವ್ಯವಸ್ಥೆ ಸ್ಥಾಪಿಸುವ ಕುರಿತು ಪರಿಗಣಿಸಬೇಕೆಂದು ಹೇಳಿದೆ.

"ಮೊದಲು ನೀವು ಸರಿಯಾದ ಅಫಿಡವಿಟ್ ಸಲ್ಲಿಸಿಲ್ಲ, ನಂತರ ಸಲ್ಲಿಸಿದ ಅಫಿಡವಿಟ್‍ನಲ್ಲೂ ಎರಡು ಪ್ರಮುಖ ವಿಚಾರಗಳ ಕುರಿತು ಉಲ್ಲೇಖಿಸಿಲ್ಲ,  ಟಿವಿಯಲ್ಲಿ ಇಂತಹ ವಿಚಾರಗಳ ಪ್ರಸಾರ ಕುರಿತಂತೆ ಏನು ಮಾಡಬಹುದೆಂದು ನಮಗೆ ಬೇಕಿದೆ. ನಿಯಂತ್ರಣಾ ವ್ಯವಸ್ಥೆಯಿಲ್ಲದೇ ಇದ್ದರೆ ಅಂತಹ ವ್ಯವಸ್ಥೆ ಸ್ಥಾಪಿಸಿ. ಈ ಕಾರ್ಯವನ್ನು ಎನ್‍ಬಿಎಸ್‍ಎ ನಂತಹ ಸಂಸ್ಥೆಗಳಿಗೆ ಬಿಟ್ಟು ಬಿಡಲು ಸಾಧ್ಯವಿಲ್ಲ,'' ಎಂದು ಜಸ್ಟಿಸ್ ಎ ಎಸ್ ಬೋಪಣ್ಣ ಹಾಗೂ ಜಸ್ಟಿಸ್ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದೆ. ನಿಯಂತ್ರಣಾ ವ್ಯವಸ್ಥೆಯನ್ನು ರಚಿಸಿ ಅದರ ಕುರಿತು ಮಾಹಿತಿ ನೀಡುವಂತೆ ಹೇಳಿ ನ್ಯಾಯಾಲಯ ವಿಚಾರಣೆಯನ್ನು ಮೂರು ವಾರಗಳ ನಂತರಕ್ಕೆ ಮುಂದೂಡಿದೆ.

ದೆಹಲಿಯಲ್ಲಿ ನಡೆದ ಮರ್ಕಝ್ ಕಾರ್ಯಕ್ರಮಕ್ಕೆ ಕೆಲ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಕೋಮು ಬಣ್ಣ ನೀಡಿವೆ ಎಂದು ಆರೋಪಿಸಿ ಇಂತಹ ಬೆಳವಣಿಗೆಗಳನ್ನು ತಡೆಯಬೇಕೆಂದು ಕೋರಿ ಜಮೀಯತ್ ಉಲೇಮ-ಇ-ಹಿಂದ್ ಸಲ್ಲಿಸಿದ್ದ ಅಪೀಲಿನ ಮೇಲೆ ಇಂದು ನಡೆದ ವಿಚಾರಣೆ ವೇಳೆ ಮೇಲಿನಂತೆ ನ್ಯಾಯಾಲಯ ಹೇಳಿದೆ.

"ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ಕೋವಿಡ್ ಸೋಂಕು ವ್ಯಾಪಿಸಿರುವುದು, ಕೆಲವು ತಬ್ಲೀಗಿಗಳು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಈ ಕುರಿತ ಮಾಧ್ಯಮ ವರದಿಗಳು ವಾಸ್ತವ. ಅವುಗಳನ್ನು ಸೆನ್ಸಾರ್ ಮಾಡಲು ಸಾಧ್ಯವಿಲ್ಲ,'' ಎಂದು ಕೇಂದ್ರ ತನ್ನ ಅಫಿಡವಿಟ್‍ನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News