×
Ad

ಪಕ್ಕಲಡ್ಕ: ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಡಿವೈಎಫ್‌ಐ ಮನವಿ

Update: 2020-11-17 17:47 IST

ಮಂಗಳೂರು, ನ.17: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್, ಜಪ್ಪಿನಮೊಗರು, ಕಂಕನಾಡಿ ಬಿ, ಅಳಪೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಿಗೆ ದಿನಬಳಕೆಯ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು ಹಂಪಲು ಮತ್ತು ಮೀನು, ಕೋಳಿ ಹಾಗು ಕುರಿ ಮಾಂಸಗಳನ್ನು ಕೊಂಡುಕೊಳ್ಳಲು ಸ್ಥಳೀಯವಾಗಿ ಯಾವುದೇ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಇರುವುದರಿಂದ ಜನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಪಕ್ಕಲಡ್ಕದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಡಿವೈಎಫ್‌ಐ ಮನಪಾಕ್ಕೆ ಮನವಿ ಸಲ್ಲಿಸಿದೆ.

ಈ ಭಾಗದ ಜನ ದಿನನಿತ್ಯದ ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ನಗರ ಪ್ರದೇಶವನ್ನು ಅವಲಂಭಿಸಬೇಕಾಗುತ್ತದೆ. ಈ ಗ್ರಾಮಗಳ ಜನರು ನಗರ ಪ್ರದೇಶವನ್ನು ಅವಲಂಭಿಸುವುದು ಕಷ್ಟವಾಗಿದೆ. ಇಲ್ಲಿ ವಸತಿ ಸಂಕೀರ್ಣಗಳು, ಬಡಾವಣೆಗಳು, ಹೌಸಿಂಗ್ ಕಾಲನಿಗಳು ನಿರ್ಮಾಣಗೊಳ್ಳುತ್ತಿದೆ. ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಈ ಗ್ರಾಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳಿಲ್ಲ. ಮುಖ್ಯವಾಗಿ ಮಾರುಕಟ್ಟೆ, ಪಾರ್ಕ್, ಆಟದ ಮೈದಾನ, ಆರೋಗ್ಯ ಕೇಂದ್ರ, ಹಿಂದೂ ರುದ್ರಭೂಮಿ ಹೀಗೆ ಹಲವಾರು ರೀತಿಯ ಮೂಲಭೂತ ಸೌಕರ್ಯಗಳಿಂದ ಜನ ವಂಚಿತರಾಗಿರುತ್ತಾರೆ. ಆದರೆ ಈ ಎಲ್ಲಾ ಬೇಡಿಕೆಗಳ ನಡುವೆ ಈ ಭಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಮುಖಂಡರಾದ ಧಿರಜ್, ರಿತೇಶ್, ಯಶ್‌ರಾಜ್, ವರಪ್ರಸಾದ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News