ಜನರ ಧ್ವನಿಗೆ ರಾಷ್ಟ್ರಪತಿ ಪ್ರತಿಸ್ಪಂದಿಸಲಿ: ಸಲೀಂ ಅಹ್ಮದ್

Update: 2020-11-17 13:43 GMT

ಉಡುಪಿ, ನ.17: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಕಾಯಿದೆಗಳ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸುತಿದ್ದು, ಇದೀಗ ದೇಶದ ಕೋಟ್ಯಾಂತರ ಜನರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ನೀಡುತ್ತಿದೆ. ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನರ ಈ ಧ್ವನಿಗೆ ರಾಷ್ಟ್ರಪತಿಗಳು ಸ್ಪಂಧಿಸಿ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಭೂಮಸೂದೆ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲೆಯ 1111 ಬೂತ್‌ಗಳಲ್ಲಿ ಸಂಗ್ರಹಿಸಿದ 75000 ಮಂದಿಯ ಸಹಿಗಳ ಪ್ರತಿಯನ್ನು ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರಿಂದ ಸ್ವೀಕರಿಸಿ ಅವರು ಮಾತನಾಡುತಿದ್ದರು.

ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ಸೂಚನೆಯಂತೆ ದೇಶಾದ್ಯಂತ ಕಾಂಗ್ರೆಸ್ ಎರಡು ಕೋಟಿ ಜನರ ಸಹಿಗಳನ್ನು ಸಂಗ್ರಹಿಸಲಾ ಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜನರು ನಿರೀಕ್ಷೆಗೂ ಮೀರಿ ಸ್ಪಂಧಿಸುವ ಮೂಲಕ ಹೋರಾಟಕ್ಕೆ ಬಲ ನೀಡಿದ್ದಾರೆ. ರೈತ ವಿರೋಧಿಯಾದ, ಕಾರ್ಮಿಕ ವಿರೋಧಿಯಾದ ಕಾಯ್ದೆಗಳಿಗೆ ರಾಷ್ಟ್ರಪತಿಗಳು ಅಂಕಿತವನ್ನು ಹಾಕದಂತೆ ನಾವು ಒತ್ತಾಯಿಸುತ್ತೇವೆ. ರಾಷ್ಟ್ರಪತಿ ಗಳು ಜನರ ಧ್ವನಿಗೆ ಸ್ಪಂಧಿಸಬೇಕಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಬಿಜೆಪಿ ಸರಕಾರಗಳು ಮಾಡಿರುವ ತಿದ್ದುಪಡಿಗಳು ದೇಶದ ಬೆನ್ನೆ ಲುಬು ಎಂದು ಕರೆಯುವ ಶೇ.70ರಷ್ಟು ರೈತರಿಗೆ ಮಾರಕವಾದುದು. ರಾಜ್ಯ ವಿಧಾನಸಭೆ ಯಲ್ಲಿ ತಮ್ಮ ಬಹುಮತದ ಮೂಲಕ ಕಾಯ್ದೆ ಅಂಗೀಕಾರಗೊಳ್ಳುವಂತೆ ಮಾಡಿದ ಸರಕಾರ, ವಿಧಾನಪರಿಷತ್‌ನಲ್ಲಿ ಇದರಲ್ಲಿ ಯಶಸ್ವಿಯಾಗಿಲ್ಲ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿದರು. ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರೆ, ವೆರೋನಿಕಾ ಕರ್ನೇಲಿಯೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News