ಮೋಡರ್ನಾ ಕಂಪೆನಿಯಿಂದ 94.5 ಶೇ. ಪರಿಣಾಮಕಾರಿ ಕೊರೋನ ಲಸಿಕೆ ಘೋಷಣೆ
ವಾಶಿಂಗ್ಟನ್, ನ. 17: ಕೊನೆಯ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ತನ್ನ ಕೋವಿಡ್-19 ಲಸಿಕೆ 94.5 ಶೇಕಡ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ ಎಂದು ಅವೆುರಿಕದ ಔಷಧ ತಯಾರಿಕಾ ಕಂಪೆನಿ ಮೋಡರ್ನಾ ಇಂಕ್ ಹೇಳಿದೆ.
ಫೈಝರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆ 90 ಶೇಕಡಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬ ಸುದ್ದಿ ಹೊರಬಿದ್ದ ಒಂದು ವಾರದ ಬಳಿಕ, ಈ ಎರಡನೇ ಭರವಸೆದಾಯಕ ಲಸಿಕೆಯನ್ನು ಘೋಷಿಸಲಾಗಿದೆ.
ಈ ಎರಡೂ ಲಸಿಕೆಗಳನ್ನು ಮೆಸೆಂಜರ್ ಆರ್‌ಎನ್‌ಎ ಎಂಬ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಈ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಲಕ್ಷಣಗಳನ್ನು ತೋರಿಸುವ ಬಹುತೇಕ ಎಲ್ಲ ಕೊರೋನ ವೈರಸ್ ಪ್ರಕರಣಗಳನ್ನು ಮೋಡರ್ನಾದ ಲಸಿಕೆ ತಡೆದಿದೆ ಎನ್ನುವುದನ್ನು 30,000ಕ್ಕೂ ಅಧಿಕ ಜನರ ಮೇಲೆ ನಡೆಸಿದ ಪ್ರಯೋಗಗಳಿಂದ ತಿಳಿದುಬಂದಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಕಂಪೆನಿ ತಿಳಿಸಿದೆ.
ಮೇಲುಗೈ ಸಾಧಿಸಿದ ಮೋಡರ್ನಾ ಲಸಿಕೆ
ಮೋಡರ್ನಾ ಕಂಪೆನಿಯ ಕೊರೋನ ವೈರಸ್ ಲಸಿಕೆಯು ಫೈಝರ್ ಕಂಪೆನಿಯ ಲಸಿಕೆಗೆ ಹೋಲಿಸಿದರೆ ನಿಭಾಯಿಸಲು ಸುಲಭವಾಗಿದೆ. ಎರಡೂ ಲಸಿಕೆಗಳನ್ನು ಒಂದೇ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆಯಾದರೂ, ಅವುಗಳನ್ನು ಸಂಗ್ರಹಿಸಿಡುವ ಉಷ್ಣತೆಯಲ್ಲಿ ಭಾರಿ ವ್ಯತ್ಯಾಸವಿದೆ.
ಫೈಝರ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಂಪಿನಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಇದು ಲಸಿಕೆಯ ವಿತರಣೆ ಪ್ರಕ್ರಿಯೆಯಲ್ಲಿ ದೊಡ್ಡ ಹಿನ್ನಡೆಯಾಗಿದೆ. ಆದರೆ, ಮೋಡರ್ನಾ ಕಂಪೆನಿಯ ಲಸಿಕೆಯನ್ನು ಒಂದು ತಿಂಗಳ ಕಾಲ ಸಾಮಾನ್ಯ ಫ್ರಿಜ್ ಉಷ್ಣತೆಯಲ್ಲಿ ಸಂಗ್ರಹಿಸಿಡಬಹುದಾಗಿದೆ.