ಬನ್ನೂರಿನಲ್ಲಿ ಸೀ ಫುಡ್ ಪಾರ್ಕ್ ಯೋಜನೆ; ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ -ಮಠಂದೂರು

Update: 2020-11-17 16:13 GMT

ಪುತ್ತೂರು : ಪ್ರಧಾನಿ ನರೆಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯಂತೆ ಗ್ರಾಮೀಣ ಭಾಗದ ಯುವಕರಿಗೂ ಉದ್ಯೋಗ, ಉದ್ದಿಮೆ ಸೃಷ್ಠಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ಬನ್ನೂರಿನಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ  ಮೂಲಕ ಒಂದೊಂದು ಜಿಲ್ಲೆಗೆ ಒಂದೊಂದು ಯೋಜನೆ ಕೊಡುತ್ತಿದ್ದಾರೆ. ದ.ಕ. ಜಿಲ್ಲೆಗೆ ಮತ್ಸೋದ್ಯಮ ಸೀ ಫುಡ್ ಪಾರ್ಕ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದಕ್ಕೆ ಮಂಗಳೂರಿನ ಕೇಂದ್ರ ಸ್ಥಾನದಿಂದ ಮತ್ತು ವಿಮಾನ ನಿಲ್ದಾಣದಿಂದ 50 ಕಿ.ಮೀ ವ್ಯಾಪ್ತಿಯ ಒಳಗಡೆ ನಿರ್ಮಾಣ ಮಾಡಬೇಕಾಗಿರುವ ಮಾರ್ಗ ಸೂಚಿಯಂತೆ ದ.ಕ. ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅವಕಾಶ ಕೊಟ್ಟಿದ್ದಾರೆ. ಇದೊಂದು ಮೌಲ್ಯ ವರ್ಧಿತ ಉತ್ಪನ್ನ ಮತ್ತು ಗೃಹೋಪಯೋಗಿ ಆಹಾರ ಉತ್ಪನ್ನ ಉದ್ಯಮವಾಗಿರುವುದರಿಂದ 2 ಸಾವಿರಕ್ಕೂ ಇದರಲ್ಲಿ ಅಧಿಕ ಮಂದಿಗೆ ಉದ್ಯೋಗ ಸಿಗಲಿದೆ ಎಂದರು.

ಸೀ ಫುಡ್ ಪಾರ್ಕ್‍ಗೆ ಕನಿಷ್ಠ 50 ಎಕರೆ ನಿವೇಶನ ಬೇಕಾಗಿದ್ದು ಒಂದೇ ಕಡೆ ಇಷ್ಟೊಂದು ದೊಡ್ಡ ಮಟ್ಟದ ನಿವೇಶನ ತಕ್ಷಣಕ್ಕೆ ಸಿಗುವ ನಿಟ್ಟಿನಲ್ಲಿ ಮತ್ತು ರೂ. 50 ಕೋಟಿ ಅನುದಾನ ಕೈ ತಪ್ಪಬಾರದು ಎಂದು ಈಗಾಗಲೇ ಈ ಹಿಂದೆ ಮೆಡಿಕಲ್ ಕಾಲೇಜ್‍ಗೆ ಕಾಯ್ದಿರಿಸಿದ ಜಾಗವನ್ನು ಸೀ ಫುಡ್ ಪಾರ್ಕ್‍ಗೆ ಮೀಸಲಿಟ್ಟು, ಮುಂದೆ ಮೆಡಿಕಲ್ ಕಾಲೇಜ್‍ಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಬೇರೆ ಕಡೆ ನಿವೇಶನ ಹುಡುಕುವ ಕುರಿತು ಅಧಿಕಾರಿಗಳ ಸಲಹೆಯಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಉದ್ಯೋಗ ಸೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಕೆಲವೊಂದು ಅಪಸ್ವರ ಗಳು ಕೇಳಿ ಬರುತ್ತಿದೆ. ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಈ ಯೋಜನೆ ಪೂರಕವಾಗಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ರಹಿತ ಚಿಂತನೆ ನಡೆಸಬೇಕು. ರಾಜಕೀಯ ನಾಯಕರು ಇದಕ್ಕೆ ತಮಗೆ ಬೇಕಾದ ಹಾಗೆ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ನಿರ್ಮಾಣ ಮಾಡುವ ಸಂಗತಿ ಮಾಡುತ್ತಿರುವುದನ್ನು ಬಿಟ್ಟು ನೇರವಾಗಿ ಅವರಿಗೆ ನಮ್ಮ ಜೊತೆ ಮಾತುಕತೆ ಮಾಡಬಹುದು. ಪುತ್ತೂರು ಮುಂದೆ 25 ವರ್ಷದಲ್ಲಿ ಹೇಗಿರಬೇಕು? ಪುತ್ತೂರಿನ ಬೆಳವಣಿಗೆ ಹೇಗಾಗಬೇಕು? ಎಂಬುದರ ಕುರಿತು ಯೋಚನೆ ಮಾಡಬೇಕು ಹೊರತು ಯಾವುದೋ ರಾಜಕೀಯ ದುರುದ್ದೇಶದ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ ಜೈನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News