ಸೀಫುಡ್ ಪಾರ್ಕ್ ನಿರ್ಮಾಣ ವಿರೋಧಿಸಿ ಡಿ.ವೈ.ಎಫ್.ಐನಿಂದ ಆಕ್ಷೇಪ ಸಲ್ಲಿಕೆ

Update: 2020-11-17 16:24 GMT

ಪುತ್ತೂರು: ತಾಲೂಕಿನ ಬನ್ನೂರು ಎಂಬಲ್ಲಿ  ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೀಸಲಿಟ್ಟ ಜಾಗದಲ್ಲಿ ಸೀ ಫುಡ್ ಪಾರ್ಕ್ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಮಂಗಳವಾರ ವಿಟ್ಲ ಡಿವೈಎಫ್ಐ ವತಿಯಿಂದ ತಹಸೀಲ್ದಾರ್ ಮತ್ತು‌ ಬನ್ನೂರು ಗ್ರಾಮಕರಣಿಕರಿಗೆ ಮನವಿ‌ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಲಾಯಿತು.

ಬನ್ನೂರು ಗ್ರಾಮಕರಣಿಕರ ಪ್ರಕಟನೆಯ ಮೂಲಕ ಬನ್ನೂರು ಗ್ರಾಮದ ಸರ್ವೆ ನಂಬ್ರ 84 ರಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ 40 ಎಕ್ರೆ ಭೂಮಿಯನ್ನು ರದ್ದು ಪಡಿಸಿ  ಸೀ ಪುಡ್ ಪಾರ್ಕ್ ಯೋಜನೆಗಾಗಿ ಪರಭಾರೆ ಮಾಡಲು ಮಾನ್ಯ ಉಸ್ತುವಾರಿ ಸಚಿವರು ಟಿಪ್ಪಣಿ ಬರೆದಿರುವುದು ನಮ್ಮ  ಗಮನಕ್ಕೆ ಬಂದಿರುತ್ತದೆ .ಗ್ರಾಮ ಕರಣಿಕರ ಕಚೇರಿ 7 ದಿನಗಳ ಒಳಗೆ ಸಾರ್ವಜನಿಕ ಆಕ್ಷೇಪಗಳನ್ನು ಸಲ್ಲಿಸಲು  ನೋಟೀಸ್ ಪ್ರಕಟಿಸಿರುತ್ತದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ವೈದ್ಯಕೀಯ ಕಾಲೇಜನ್ನು ನಿರ್ಮಾಣ ಮಾಡಿದಲ್ಲಿ, ಪುತ್ತೂರು ಪೇಟೆಯ ಬೆಳವಣಿಗೆ ಆಗುತ್ತದೆ, ವ್ಯವಹಾರಿಕವಾಗಿ ಹಾಗೂ ಶೈಕ್ಷಣಿಕವಾಗಿಯೂ  ಅಭಿವೃದ್ಧಿಯಾಗುತ್ತದೆ. ಅಲ್ಲದೆ ಅನೇಕ ಉದ್ಯೋಗ ಸೃಷ್ಟಿಯಾಗುತ್ತದೆ.

ಪುತ್ತೂರು ತಾಲೂಕಿನ ಹಾಗೂ ಆಸುಪಾಸು ಗ್ರಾಮದ ನೂರಾರು ವಿದ್ಯಾರ್ಥಿಗಳು ಈಗ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ದೂರ ದೂರದ ಊರಿಗೆ ಹೋಗಿ ಅಲೆದು ಕಷ್ಟಪಟ್ಟು ಕಲಿಯುತ್ತಾ ಇದ್ದಾರೆ. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಆದಲ್ಲಿ ಇದನ್ನೆಲ್ಲ ತಪ್ಪಿಸಬಹುದು.

ಪುತ್ತೂರಿನಲ್ಲಿ ಸೀಫುಡ್ ಹಬ್ ಮಾಡಲು ಯಾವುದೇ ಪೂರಕ ಕಾರಣಗಳಿಲ್ಲ ಏಕೆಂದರೆ ಇಲ್ಲಿ ಸಮುದ್ರ ಇಲ್ಲ ದೂರದ ಮಂಗಳೂರು ಇತರ ಕಡೆ ಗಳಿಂದ ತಂದ ಸಾಗರದ ಆಹಾರೋತ್ಪನ್ನಗಳನ್ನು ಪುತ್ತೂರಿನಲ್ಲಿ ಪ್ರೊಸೆಸಿಂಗ್ ಮಾಡಿ ಮತ್ತೆ ಅದನ್ನು ದೂರದ ಊರಿಗೆ ಕಳಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಧಿಕ ಸಾರಿಗೆ ವೆಚ್ಚ ತಗಲುತ್ತದೆ. ಸದರಿ ಸೀಫುಡ್ ಹಬ್ ನ್ನು ಸಮುದ್ರ ಇರುವ  ಸ್ಥಳದಲ್ಲಿ ಮಾಡಿದ್ದಲ್ಲಿ ಈ ಸಾರಿಗೆ ವೆಚ್ಚಗಳನ್ನು ಅತ್ಯಂತ ಕಡಿಮೆ ಮಾಡಬಹುದು.

ಆದ್ದರಿಂದ ಪುತ್ತೂರಿನ ಬನ್ನೂರಿನಲ್ಲಿ  ಸರಕಾರಿ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಕಾಯ್ದಿರಿಸಿದ ಸ್ಥಳದಲ್ಲೇ ಸರಕಾರಿ ವೈದ್ಯಕೀಯ ಕಾಲೇಜು ಮಾಡಬೇಕೆಂದು ಹಾಗೂ ಅದಕ್ಕೆ ನಿಗದಿಪಡಿಸಿದ ಜಾಗವನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸ ಬಾರದಾಗಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ  ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಇರ್ಪಾನ್, ಮಹಮ್ಮದ್ ಹನೀಫ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News