ಕೊರೋನಕ್ಕಿಂತಲೂ ಹವಾಮಾನ ಬದಲಾವಣೆ ಹೆಚ್ಚು ಅಪಾಯಕಾರಿ: ರೆಡ್ ಕ್ರಾಸ್ ವರದಿ
Update: 2020-11-17 22:04 IST
ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 17: ಜಗತ್ತು ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಪ್ರತಿಕ್ರಿಯಿಸುತ್ತಿರುವ ರೀತಿಯಲ್ಲೇ ಹವಾಮಾನ ಬದಲಾವಣೆಗೂ ಪ್ರತಿಕ್ರಿಯಿಸಬೇಕು ಎಂದು ರೆಡ್‌ಕ್ರಾಸ್ ಮಂಗಳವಾರ ಹೇಳಿದೆ. ಹವಾಮಾನ ಬದಲಾವಣೆಯು ಕೋವಿಡ್-19ಕ್ಕಿಂತಲೂ ಹೆಚ್ಚಿನ ಬೆದರಿಕೆಯನ್ನು ಒಡ್ಡಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಕೊರೋನ ವೈರಸ್ ಜಗತ್ತಿನ ಮೇಲೆ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಹವಾಮಾನ ಬದಲಾವಣೆಯು ತನ್ನ ವಿನಾಶಕಾರಿ ಪರಿಣಾಮಗಳನ್ನು ನಿಲ್ಲಿಸಿಲ್ಲ ಎಂದು ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಆ್ಯಂಡ್ ರೆಡ್ ಕ್ರೆಸೆಂಟ್ ಸೊಸೈಟೀಸ್ (ಐಎಫ್‌ಆರ್‌ಸಿ) ಹೊಸ ವರದಿಯೊಂದರಲ್ಲಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್‌ನಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವನ್ನು ಘೋಷಿಸಿದ ಬಳಿಕ, ಜಗತ್ತಿಗೆ 100ಕ್ಕಿಂತಲೂ ಅಧಿಕ ವಿಪತ್ತುಗಳು ಅಪ್ಪಳಿಸಿವೆ ಎಂದು ಹೇಳಿರುವ ವರದಿ, ಈ ಪೈಕಿ ಹೆಚ್ಚಿನವು ಹವಾಮಾನ ಸಂಬಂಧಿ ವಿಪತ್ತುಗಳು ಎಂದಿದೆ.