ಅಯೋಧ್ಯೆ ಭೂಮಿಯ ಧಾರಣಾ ಸಾಮರ್ಥ್ಯ ಪರೀಕ್ಷೆಯೇ ದೊಡ್ಡ ಕೆಲಸ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮಂಗಳೂರು, ನ.17: ಅಯೋಧ್ಯೆ ಭೂಮಿಯ ಧಾರಣಾ ಸಾಮರ್ಥ್ಯ ಪರೀಕ್ಷೆಯೇ ಪ್ರಸ್ತುತ ದೊಡ್ಡ ಕೆಲಸ. ಅಲ್ಲಿರುವುದು ಗಟ್ಟಿನೆಲವಲ್ಲ, ಬದಲಿಗೆ ಧೂಳು ಮರಳು ತುಂಬಿದ ನೆಲ ಆಗಿರುವುದರಿಂದ ಸೂಕ್ಷ್ಮ ಪರೀಕ್ಷೆಗಳು ವೈಜ್ಞಾನಿಕವಾಗಿ ನಡೆಯುತ್ತಿವೆ. ಅದರ ಬಳಿಕವೇ ಗಟ್ಟಿಯಾದ ತಳಪಾಯ ಹಾಕಿ ಶಿಲಾಮಯ ದೇಗುಲದ ನಿರ್ಮಾಣ ಆಗಲಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆ, ದೆಹಲಿ ಸೇರಿದಂತೆ ಉತ್ತರ ಪ್ರದೇಶದ ಪುಣ್ಯ ಕ್ಷೇತ್ರಗಳ ದರ್ಶನ ನಡೆಸಿ, ವಿಎಚ್‌ಪಿ ಮಾರ್ಗದರ್ಶಕ ಮಂಡಳಿ ಸಮಾವೇಶ, ರಾಮ ಜನ್ಮಭೂಮಿ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿ ಕರಾವಳಿಗೆ ಹಿಂತಿರುಗಿರುವ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಸಂಪೂರ್ಣವಾಗಿ ಶಿಲಾಮಯವಾಗಿ ರೂಪುಗೊಳ್ಳುವುದರಿಂದ ಅಷ್ಟು ಭಾರ ಹೊರಲು ಅಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಎಷ್ಟಿದೆ ಎಂಬ ಬಗ್ಗೆ 200 ಅಡಿ ಆಳದವರೆಗೆ ಪರೀಕ್ಷೆ ನಡೆಯುತ್ತಿದೆ ಎಂದವರು ಹೇಳಿದರು.
ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪೆನಿಗೆ ವಹಿಸಲಾಗಿದೆ. ದೇಗುಲ ನಿರ್ಮಾಣದ ಪ್ರತಿ ಹಂತದಲ್ಲೂ ಪರಿಶೀಲನೆ ನಡೆಸಲು ಟಾಟಾ ಕನ್ಸಲ್ಟೆನ್ಸಿ ಕಂಪೆನಿಯನ್ನು ನಿಯೋಜಿಸಲಾಗಿದೆ. ಪ್ರತಿ ಹಂತದ ಪರಿಶೀಲನಾ ವರದಿಯನ್ನು ಈ ಕಂಪೆನಿಯು ರಾಮ ಜನ್ಮಭೂಮಿ ಟ್ರಸ್ಟ್‌ಗೆ ನೀಡಲಿದೆ ಎಂದವರು ಹೇಳಿದರು.
ನೂತನ ಮಂದಿರದಲ್ಲಿ ರಾಮನವಮಿಯಂದು ಶ್ರೀರಾಮನ ವಿಗ್ರಹವನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡುವುದು ಹಾಗೂ ಭಕ್ತರು ದೇವರಿಗೆ ನಮಸ್ಕರಿಸುವಾಗ ಸ್ವತಃ ದೇವರ ಪಾದವನ್ನು ಸ್ಪರ್ಶಿಸುವ ಅನುಭೂತಿ ಸಿಗುವಂತಾಗಲು ತ್ರೀಡಿ ತಂತ್ರಜ್ಞಾನ ಅಳವಡಿಕೆಗೆ ಪ್ರಧಾನಿ ನೇಂದ್ರ ಮೋದಿ ಅವರು ಸೂಚಿಸಿದ್ದಾರೆ. ದೇವರ ಮೂರ್ತಿಗೆ ಸೂರ್ಯ ಕಿರಣ ಸ್ಪರ್ಶ ವ್ಯವಸ್ಥೆಯ ಜವಾಬ್ದಾರಿಯನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗೆ ವಹಿಸಲಾಗಿದ್ದು, ತ್ರೀಡಿ ತಂತ್ರಜ್ಞಾನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಿಯೋಜಿಸಲಾಗಿದೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಕರ ಸಂಕ್ರಾಂತಿಯ ದಿನವಾದ ಜ.15ರಿಂದ 45 ದಿನಗಳ ಕಾಲ ಧನ ಸಂಗ್ರಹ ನಡೆಯಲಿದೆ. ಪ್ರತಿಯೊಬ್ಬ ಭಕ್ತರೂ ವೈಯಕ್ತಿಕವಾಗಿ ಕನಿಷ್ಠ 10 ರೂ., ಕುಟುಂಬ ಪರವಾಗಿ 100 ರೂ.ಗಳ ದೇಣಿಗೆ ನೀಡಬೇಕು. ಈ ಧನ ಸಂಗ್ರಹ ಕಾರ್ಯದ ಜವಾಬ್ದಾರಿ ಯನ್ನು ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಿಗೆ ನೀಡಲಾಗಿದೆ ಎಂದವರು ಹೇಳಿದರು.
ಮಂದಿರ ನಿರ್ಮಾಣಕ್ಕೆ ವೈದಿಕ ವೈದಿಕ ವಾಸ್ತುಶಾಸ್ತ್ರದ ತಂಡದ ರಚನೆಯಾಗುತ್ತಿದ್ದು, ಕುಡುಪು ಕೃಷ್ಣರಾಜ ತಂತ್ರಿಗಳು, ಗುಂಡಿಬೈಲಿನ ತಜ್ಞರು ಸೇರಿದಂತೆ ಕೇರಳದ ಒಬ್ಬರು, ಉತ್ತರ ಭಾರತದ ಇಬ್ಬರು ಮಹನೀಯರು ತಂಡದಲ್ಲಿ ಇರುತ್ತಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.