ದಿಲ್ಲಿ ಮಾರುಕಟ್ಟೆಗಳು ಮುಚ್ಚುವ ಸಾಧ್ಯತೆ ? ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿದ ಕೇಜ್ರಿವಾಲ್

Update: 2020-11-17 17:38 GMT

ಹೊಸದಿಲ್ಲಿ, ನ. 17: ಹೊಸದಿಲ್ಲಿಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಕೊರೋನ ಹಾಟ್‌ಸ್ಪಾಟ್‌ಗಳಾಗಲಿರುವ ಮಾರುಕಟ್ಟೆಗಳನ್ನು ಕೆಲವು ದಿನಗಳ ಕಾಲ ಮುಚ್ಚಲು ಅವಕಾಶ ನೀಡುವಂತೆ ಕೋರಿ ತನ್ನ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಕೊರೋನದ ಮೂರನೇ ಅಲೆ ಈಗಾಗಲೇ ಉತ್ತುಂಗ ಸ್ಥಿತಿಗೆ ತಲುಪಿದೆ. ಆದರೆ, ಇನ್ನೊಂದು ಲಾಕ್ ಡೌನ್ ಜಾರಿಗೊಳಿಸುವುದಿಲ್ಲ ಎಂದು ಹೇಳಿದ ಒಂದು ದಿನದ ಬಳಿಕ ಅರವಿಂದ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

‘‘ದಿಲ್ಲಿಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದುದರಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಅಗತ್ಯ ಬಿದ್ದರೆ, ಕೊರೋನ ಹಾಟ್‌ಸ್ಪಾಟ್ ಆಗುತ್ತಿರುವ ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಗೊಳ್ಳದ ಮಾರುಕಟ್ಟೆಗಳನ್ನು ರಾಜ್ಯ ಸರಕಾರ ಕೆಲವು ದಿನಗಳ ಕಾಲ ಮುಚ್ಚುವ ಸಾಧ್ಯತೆ ಇದೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮಾರುಕಟ್ಟೆಗಳಲ್ಲಿ ಜನಸಂದಣಿ ವಿರಳವಾಗಿದೆ. ಆದುದರಿಂದ ಮಾರುಕಟ್ಟೆಗಳನ್ನು ಮುಚ್ಚುವ ಪರಿಸ್ಥಿತಿ ಬರಲಾರದು ಎಂಬ ಭರವಸೆ ತನಗಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ಮಾರ್ಗದರ್ಶಿ ಸೂತ್ರಗಳಂತೆ ವಿವಾಹ ಕಾರ್ಯಕ್ರಮದಲ್ಲಿ 200 ಜನರು ಮಾತ್ರ ಪಾಲ್ಗೊಳ್ಳಲು ದಿಲ್ಲಿ ಸರಕಾರ ಅನುಮತಿ ನೀಡಿದೆ. ಆದರೆ, ಈಗ ನಾವು ಈ ಹಿಂದಿನ 50 ಜನರ ಮಿತಿಗೆ ಹಿಂದಿರುಗಲು ನಿರ್ಧರಿಸಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ಜನರಲ್ ಅವರಿಗೆ ಅನುಮತಿ ನೀಡಲು ಪ್ರಸ್ತಾವ ಕಳುಹಿಸಿಕೊಟ್ಟಿದ್ದೇನೆ. ಅವರು ಶೀಘ್ರದಲ್ಲಿ ಅನುಮತಿ ನೀಡಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News