×
Ad

ಪಿ.ಎಸ್. ಕೃಷ್ಣಭಟ್ಟ್ ಶಿಷ್ಯರ ಬದುಕಿಗೆ 'ಮದದ್ ಗಾರ್' ಆಗಿದ್ದಾರೆ : ಡಾ. ಶ್ರೀಶಕುಮಾರ್

Update: 2020-11-18 17:19 IST

ಕನ್ಯಾನ: "ಇಂದಿನ ದಿನಗಳಲ್ಲಿ ಎಲ್ಲೂ ಹಣದ ಅಥವಾ  ಸಂಪತ್ತಿನ ಕೊರತೆಯಿಲ್ಲ. ಆದರೆ ಅಲ್ಲಲ್ಲಿ  ಮನುಷ್ಯತ್ವದ ಕೊರತೆ ಕಾಣುತ್ತಲೇ ಇದ್ದೇವೆ. ಈ ದುರಂತವನ್ನು ತಡೆಗಟ್ಟಬೇಕಾದರೆ ನಮಗೆ ನಿಜವಾದ ಗುರುಗಳ ಅಗತ್ಯವಿದೆ. ಯಾವತ್ತೂ  ಉಪದೇಶವನ್ನು ಮಾಡದೆ,  ಮನುಷ್ಯತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಿ ತೋರಿದ ಪಿ.ಎಸ್. ಕೃಷ್ಣಭಟ್ಟರು ನಿಜವಾದ ಅರ್ಥದಲ್ಲಿ ಶಿಷ್ಯರ ಬದುಕಿಗೆ ಮದದ್ ಗಾರ್ (ಸಹಾಯಕ) ಎನಿಸಿದವರು" ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶಕುಮಾರ್.ಎಂ.ಕೆ.  ಹೇಳಿದ್ದಾರೆ.

ಕನ್ಯಾನದ 'ಶಾಂತಿ ಸದನ' ಮನೆಯಲ್ಲಿ 'ಮದದ್ ಗಾರ್ ' - ಪಿ.ಎಸ್. ಕೃಷ್ಣಭಟ್: ಸಹಸ್ರ ಚಂದಿರ- ಸಾವಿರ ನುಡಿಹಾರ'' ಕೃತಿಯ ಅನಾವರಣದ ಸರಳ ಸಮಾರಂಭದಲ್ಲಿ ಅವರು  ಮಾತನಾಡಿದರು.

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳಲ್ಲಿ ಹಿಂದಿ ಪಂಡಿತರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಕೃಷ್ಣಭಟ್ಟರ ಬಗ್ಗೆ ಶಿಷ್ಯಂದಿರು- ಅಭಿಮಾನಿಗಳು ಬರೆದ ಲೇಖನಗಳ ಸಂಗ್ರಹ ಇದಾಗಿದೆ. ''ಹಿಂದಿ ಪಠ್ಯಕ್ಕೆ ಸಂಬಂಧಿಸಿದ ಶಬ್ದಾರ್ಥ- ನೋಟ್ಸ್- ತಿದ್ದುಪಡಿ ಎಲ್ಲವನ್ನೂ  ಒಂದೇ ಕಡೆ ಹೊಂದಿದ ಮದದ್ ಗಾರ್  ಎಂಬ ಪುಸ್ತಕ ಅವರದೇ  ಕಲ್ಪನೆಯ ಕೂಸು. ಪ್ರತಿಯೊಬ್ಬನೂ ಆ  ಮೂಲಕವೇ ಅವರನ್ನು ನೆನೆಸಿಕೊಂಡಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದೆ ವಿದ್ಯಾದಾನ,  ಪರೋಪಕಾರ,  ಪ್ರಾಮಾಣಿಕತೆ,  ಸರಳ ಜೀವನ ಮುಂತಾದ ಸದ್ಗುಣಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಭಾ ವಲಯವಾಗಿ ರೂಪುಗೊಂಡಿರುವ ಕೃಷ್ಣಭಟ್ಟರಂತವರು ಸಮಾಜಕ್ಕೆ ಇನ್ನಷ್ಟು ಬೇಕು ಎಂದು ಡಾ.ಶ್ರೀಶಕುಮಾರ್ ಅಭಿಪ್ರಾಯಪಟ್ಟರು.

ಅಡ್ಯನಡ್ಕದ ಜನತಾ ಪದವಿ ಪೂರ್ವ ಕಾಲೇಜಿನ  ನಿವೃತ್ತ ಪ್ರಾಂಶುಪಾಲ  ಬಳಂತಿಮೊಗರು ಈಶ್ವರ ಭಟ್ಟರು  ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, " ಪ್ರತಿನಿತ್ಯ ಶಾಲೆಗೆ ಮೊದಲಾಗಿ ಬಂದು ಕೊನೆಯದಾಗಿ ಹೋಗುವವರು ಕೃಷ್ಣಭಟ್ಟರು. ಈ ಕ್ರಮವನ್ನು ನಿವೃತ್ತಿಯ ನಂತರ ಪದವಿ ಪೂರ್ವ ಉಪನ್ಯಾಸಕರಾದಾಗಲೂ  ತಪ್ಪಿಸಿದವರಲ್ಲ. ನೂರಕ್ಕೆ ನೂರರಷ್ಟು ತನ್ನ ಅಧ್ಯಾಪನ ವೃತ್ತಿಗೆ ನ್ಯಾಯ ಸಲ್ಲಿಸಿದ ಅವರಂಥವರಿಗೆ  ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಬಂದಿದ್ದರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತಿತ್ತು" ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ "ಪೂರೈಕೆ,ಆರೈಕೆ ಮತ್ತು ಹಾರೈಕೆಗಳು ಯಶಸ್ವೀ  ಜೀವನದ ಮೂಲ ಅವಶ್ಯಕತೆಗಳು. ಇವೆಲ್ಲ ಧಾರಾಳವಾಗಿ ಕೃಷ್ಣ ಭಟ್ಟರಿಗೆ ಒದಗಲಿ. ಅವರ ನಿಸ್ಪೃಹ ಸೇವೆ ಈ ಕೃತಿಯ ಮೂಲಕ ಅಚ್ಚಳಿಯದೆ ದಾಖಲಾಗಲಿ. ಸಾವಿರ ಹುಣ್ಣಿಮೆ ಕಂಡವರು ನೂರು ವಸಂತಗಳನ್ನು ಅನುಭವಿಸುವಂತಾಗಲಿ" ಎಂದು ಹಾರೈಸಿ ಪಿ.ಎಸ್. ಕೃಷ್ಣಭಟ್ ದಂಪತಿಗೆ ಶಾಲುಹೊದಿಸಿ ಪುಸ್ತಕ ಹಾರವನ್ನಿತ್ತು  ಗೌರವಿಸಿದರು.

ಪಟ್ಟಾಜೆ ಸುಬ್ರಹ್ಮಣ್ಯ ಭಟ್ ಮತ್ತು ಪಟ್ಟಾಜೆ ವಿಶ್ವನಾಥ ಭಟ್ ತಮ್ಮ ಆದ್ಯ ಹಿಂದಿ ಗುರುಗಳಿಗೆ ಶಾಲು- ಫಲಸಮರ್ಪಣೆಗೈದು ಗೌರವಿಸಿದರು. ಪಿ.ಎಸ್. ಕೃಷ್ಣಭಟ್ ಮತ್ತು ವಿಶಾಲಾಕ್ಷಿ ಕೃಷ್ಣಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಸ್ತಕದ ಸಂಪಾದನೆ ಮಾಡಿದ  ಸಹೋದರರಾದ ಅನಂತ ಸುಬ್ರಹ್ಮಣ್ಯ ಶರ್ಮ ವಿ.ಕೆ, ಅಶೋಕ ಶ್ಯಾಮ ಪ್ರಸಾದ ವಿ.ಕೆ, ಅರುಣಕುಮಾರ ವಿ.ಕೆ ಹಾಗೂ ಡಾ. ವಿಶ್ವೇಶ್ವರ.ವಿ.ಕೆ. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News