×
Ad

ಸ್ವ ನಿಧಿಯಡಿ 5 ಸಾವಿರ ಮಂದಿಗೆ ಸಾಲ : ದಿವಾಕರ ಪಾಂಡೇಶ್ವರ

Update: 2020-11-18 19:06 IST

ಮಹಾನಗರ, ನ. 18: ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ (ಸ್ವ ನಿಧಿ)ಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಿಸುವ ಗುರಿಯಿದೆ ಎಂದು ಮಂಗಳೂರು ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಬಗ್ಗೆ ಬುಧವಾರ ಮಂಗಳೂರು ಪಾಲಿಕೆಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಕೊರೊನಾ ಕಾರಣದಿಂದ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಅಭಿವೃದ್ಧಿಗೆ ಹಾಗೂ ಅವರ ವ್ಯವಹಾರವನ್ನು ಪುನರ್ ಪ್ರಾರಂಭಿಸುವ ಸಲುವಾಗಿ ತುರ್ತು ಬಂಡವಾಳವನ್ನು ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರಕಾರದ ಆತ್ಮ ನಿರ್ಬರ್ ಯೋಜನೆ ಅಡಿಯಲ್ಲಿ ಕಿರು ಸಾಲ ಯೋಜನೆ ಪ್ರಕಟಿಸಲಾಗಿದೆ. ಇದಕ್ಕೆ ಅರ್ಹ ಲಾನುಭವಿ ಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಉತ್ತಮ ಯೋಜನೆ, ಆದರೆ ಲಾನುಭವಿಗಳ ಆಯ್ಕೆ ಹೇಗೆ? ಮಾನದಂಡ ಏನು? ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಪಾಲಿಕೆಯ ಎಲ್ಲ ಸದಸ್ಯರಿಗೆ ಮೊದಲು ಮಾಹಿತಿ ನೀಡಿ ಬಳಿಕ ಯೋಜನೆಯ ಲಾನುಭವಿಗಳನ್ನು ಸರ್ವೆ ಮೂಲಕ ಆಯ್ಕೆ ಮಾಡುವಂತೆ ಪಾಲಿಕೆ ಸದಸ್ಯರು ಆಗ್ರಹಿಸಿದರು.

ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಮಾತನಾಡಿ, ಈ ಯೋಜನೆಗೆ ಯಾವ ಮಾನದಂಡದ ಮೂಲಕ ಲಾನುಭವಿಗಳ ಆಯ್ಕೆ ಮಾಡಲಾಗು ತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.

ಕಾರ್ಪೊರೇಟರ್ ಮನೋಹರ್ ಕದ್ರಿ, ಕಿರಣ್ ಕುಮಾರ್ ಮಾತನಾಡಿ, ಕೇವಲ ತಳ್ಳು ಗಾಡಿಗಳನ್ನು ಮಾತ್ರ ಗುರುತಿಸುವ ಬದಲು ಸಣ್ಣ ಸಣ್ಣ ಗೂಡಂಗಡಿಗಳನ್ನು ಈ ಯೋಜನೆ ವ್ಯಾಪ್ತಿಗೆ ತಂದರೆ ಅನುಕೂಲ ಎಂದು ಹೇಳಿದರು. ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಪಷ್ಟ ಮಾನದಂಡ ಅಡಿಯಲ್ಲೇ ಈ ಯೋಜನೆ ಜಾರಿಗೆ ತರಬೇಕು. ಈ ಮೂಲಕ ಸೌಲಭ್ಯ ಅರ್ಹರಿಗೆ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಡಿಜಿಟಲ್ ವ್ಯವಹಾರಕ್ಕೆ 1200 ರೂ. ಕ್ಯಾಶ್‌ಬ್ಯಾಕ್!

ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಭದ್ರತೆ ಇಲ್ಲದೆ 10 ಸಾವಿರ ರೂ. ವರೆಗೆ ಸಾಲ ನೀಡಲಾಗುತ್ತದೆ. ಸಾಲದ ಮೇಲಿನ ಬಡ್ಡಿಗೆ ಶೇ.7 ರಷ್ಟು ಸಬ್ಸಿಡಿ, ಡಿಜಿಟಲ್ ವ್ಯವಹಾರಕ್ಕಾಗಿ ವಾರ್ಷಿಕ 1,200 ರೂ. ವರೆಗೆ ಕ್ಯಾಶ್ ಬ್ಯಾಕ್ ಮತ್ತು ನಿಗದಿತ ಸಮಯ ದೊಳಗೆ ಮರು ಪಾವತಿ ಮಾಡಿದರೆ ಇನ್ನೂ ಹೆಚ್ಚಿನ ಸಾಲ ಪಡೆಯಲು ಅರ್ಹತೆಯನ್ನು ಫಲಾನುಭವಿಗಳು ಪಡೆಯುತ್ತಾರೆ. ಅರ್ಜಿ ಸಲ್ಲಿಸಲು ಮತ್ತು ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಲಾಲ್‌ಬಾಗ್ ಕಚೇರಿಯ ಬಡತನ ನಿರ್ಮೂಲನಾ ಕೋಶದಲ್ಲಿ ಡೇ ನಲ್ಮ್ ಯೋಜನೆಯ ನಗರ ಅಭಿಯಾನ ನಿರ್ವಹಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ವ್ಯವಹಾರ ಅಧಿಕಾರಿ ಅಥವಾ ನಗರ ಅಭಿಯಾನ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು.

ಡಾ. ಸಂತೋಷ್ ಕುಮಾರ್, ಉಪ ಆಯುಕ್ತ, ಮನಪಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News