×
Ad

ಶೇ.57ರಷ್ಟು ಬಿಹಾರ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿಯಲ್ಲಿ ಬಹಿರಂಗ

Update: 2020-11-18 20:20 IST
ಫೈಲ್ ಚಿತ್ರ

ಹೊಸದಿಲ್ಲಿ,ನ.18: ಸೋಮವಾರ ಅಧಿಕಾರ ಸ್ವೀಕರಿಸಿರುವ ಬಿಹಾರದ ಎನ್‌ಡಿಎ ಸರಕಾರದಲ್ಲಿ ನೂತನವಾಗಿ ನೇಮಕಗೊಂಡಿರುವ 14 ಸಚಿವರ ಪೈಕಿ ಎಂಟು(ಶೇ.57) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.

ಆರು(ಶೇ.43) ಸಚಿವರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. ಗಂಭೀರ ಕ್ರಿಮಿನಲ್ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಿಗೆ ಸಂಬಂಧಿಸಿದ್ದು, ಐದು ವರ್ಷಕ್ಕೂ ಹೆಚ್ಚಿನ ಜೈಲುಶಿಕ್ಷೆಯನ್ನು ವಿಧಿಸಲಾಗುತ್ತದೆ.

 ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಚಿವರಲ್ಲಿ ಇಬ್ಬರು ಜೆಡಿಯು,ನಾಲ್ವರು ಬಿಜೆಪಿ ಹಾಗೂ ತಲಾ ಓರ್ವರು ಎಚ್‌ಎಎಂ ಮತ್ತು ವಿಐಪಿಗೆ ಸೇರಿದವರಾಗಿದ್ದಾರೆ.

 13(ಶೇ.93) ಸಚಿವರು ಕೋಟ್ಯಧಿಪತಿಗಳಾಗಿದ್ದು,ಸರಾಸರಿ 3.95 ಕೋ.ರೂ.ಗಳ ಆಸ್ತಿಗಳನ್ನು ಹೊಂದಿದ್ದಾರೆ. ಈ ಪೈಕಿ ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮೇವಾಲಾಲ ಚೌಧರಿ 12.31 ಕೋ.ರೂ.ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಸಚಿವರಾಗಿದ್ದು,ಅಶೋಕ ಚೌಧರಿ ಅವರು 72.89 ಲ.ರೂ.ಗಳ ಅತ್ಯಂತ ಕಡಿಮೆ ಆಸ್ತಿವಂತರಾಗಿದ್ದಾರೆ.

ನಾಲ್ವರು (ಶೇ.29) ಸಚಿವರು 8ರಿಂದ 12ನೇ ತರಗತಿವರೆಗಿನ ವಿದ್ಯಾರ್ಹತೆಯನ್ನು ಹೊಂದಿದ್ದರೆ,10 (ಶೇ.71) ಸಚಿವರು ಪದವಿ ಅಥವಾ ಹೆಚ್ಚಿನ ಶಿಕ್ಷಣವನ್ನು ಪಡೆದಿದ್ದಾರೆ. ಆರು (ಶೇ.43) ಸಚಿವರ ವಯೋಮಾನ 41ರಿಂದ 50 ವರ್ಷಗಳಾಗಿದ್ದರೆ,ಎಂಟು (ಶೇ.57) ಸಚಿವರು 51ರಿಂದ 75 ವರ್ಷ ವಯೋಮಾನದವರಾಗಿದ್ದಾರೆ. 14 ಸಚಿವರ ಪೈಕಿ ಇಬ್ಬರು ಮಹಿಳೆಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News