ವಿಮಾನ ನಿಲ್ದಾಣದ ಸಮೀಪ ಸೇನಾ ಸಮವಸ್ತ್ರ ಧರಿಸಿದ್ದ 11 ಮಂದಿಯ ಬಂಧನ

Update: 2020-11-18 15:23 GMT

ಗುವಾಹಟಿ, ನ. 18: ಸೂಕ್ತ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಗುವಾಹಟಿ ಲೋಕಪ್ರಿಯ ಗೋಪಿನಾಥ್ ಬೋರ್ಡೋಲೋಯ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಿಂದ ಸೇನಾ ಸಮವಸ್ತ್ರ ಧರಿಸಿದ 11 ಮಂದಿಯನ್ನು ಅಸ್ಸಾಂ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಮ್ಮ ಪರಿಶೀಲನೆಯ ಸಂದರ್ಭ, ಅವರಿಗೆ ಸೇನಾ ಸಮವಸ್ತ್ರ ಧರಿಸುವ ಅಧಿಕಾರ ಇಲ್ಲ ಎಂಬುದು ಹಾಗೂ ಅವರಿಗೆ ಬೇರೆ ಉದ್ದೇಶ ಇರುವುದು ತಿಳಿದು ಬಂತು ಎಂದು ಪೊಲೀಸರು ತಿಳಿಸಿದ್ದಾರೆ. ‘‘ಅವರು ಕಾನೂನು ಬಾಹಿರವಾಗಿ ಸೇನಾ ಸಮವಸ್ತ್ರ ಧರಿಸಿದ್ದರು. ಅಲ್ಲದೆ ಅವರಲ್ಲಿ ಭಾರತೀಯ ಸೇನೆಯ ಯಾವುದೇ ಕಾನೂನುಬದ್ಧ ಹಾಗೂ ಸೂಕ್ತ ಗುರುತು ಚೀಟಿ ಇರಲಿಲ್ಲ. ಅವರಲ್ಲಿ ಏನೋ ಸಂಚು ಇರುವಂತೆ ಕಾಣುತ್ತದೆ. ವಿವರಗಳನ್ನು ಬಯಲಿಗೆಳೆಯಬೇಕಿದೆ’’ ಎಂದು ಗುವಾಹಟಿಯ ಪೊಲೀಸ್ ಜಂಟಿ ಆಯುಕ್ತ ದೇಬರಾಜ್ ಉಪಾಧ್ಯಾಯ ಹೇಳಿದ್ದಾರೆ.

11 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ 11 ಮಂದಿ ಕಳೆದ ಒಂದು ತಿಂಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಉಪಾಧ್ಯಾಯ ತಿಳಿಸಿದ್ದಾರೆ. ಬಂಧಿತರಲ್ಲಿ ಓರ್ವನಾದ ದ್ರಿಮಾನ್ ಗೋಸ್ವಾಮಿ ನಕಲಿ ನೇಮಕಾತಿ ಪತ್ರ ನೀಡಿದ್ದ. ಬಂಧಿತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಕೆಲವು ದಾಖಲೆಗಳು, ಗುರುತು ಪತ್ರಗಳು ಪತ್ತೆಯಾಗಿವೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News