ಮೀಸಲಾತಿ ಮಾರ್ಪಾಡು ಮಾಡುವ ಮೂಲಕ ದಲಿತರಿಗೆ ಅಧಿಕಾರ ತಪ್ಪಿಸಿದರು: ರಮಾನಾಥ ರೈ

Update: 2020-11-18 15:26 GMT

ಬಂಟ್ವಾಳ, ನ.18: ದಲಿತ ಸಮುದಾಯಕ್ಕೆ ಮೀಸಲಾಗಿದ್ದ ಬಂಟ್ವಾಳ ಪುರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ತಡೆದು ಸಾಮಾನ್ಯ ವರ್ಗಕ್ಕೆ ಮಾರ್ಪಾಡು ಮಾಡುವ ಮೂಲಕ ದಲಿತರು ಅಧಿಕಾರಕ್ಕೆ ಬಾರದಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪರೋಕ್ಷವಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಬಂಟ್ವಾಳ ಪುರಸಭೆಯ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷ ಮುಹಮ್ಮದ್ ಶರೀಫ್ ಮತ್ತು ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ ಅವರ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆರಂಭದಲ್ಲಿ ಪುರಸಭೆಯ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ‌ ಮೀಸಲಾಗಿತ್ತು. ಆದರೆ ಇದನ್ನು ತಡೆದು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಮಾಡಿದರು. ಅಲ್ಲದೆ ಅಧಿಕಾರ ಶಾಹಿಗಳು ಅಧಿಕಾರ ಮಾಡಿದ್ದರಿಂದ ಎರಡು ವರ್ಷಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದೆ ಪುರಸಭೆಯ ಅಭಿವೃದ್ಧಿ ಕಾರ್ಯಗಳು ಕೂಡಾ ನೆನೆಗುದಿಗೆ ಬಿದ್ದಿದೆ ಎಂದು ಅವರು ಹೇಳಿದರು.

ನಾನು ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ  ಪುರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಇಡೀ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದೇನೆ. ಪರಿಸರ ಇಲಾಖೆಯಿಂದ ಪುರಸಭೆಗೆ ಸ್ವಂತ ಜೆಸಿಬಿ ಯಂತ್ರ, ಟಿಪ್ಪರ್ ಲಾರಿ, ಮಿನಿ ಟಿಪ್ಪರ್ ಗಳನ್ನು ಒದಗಿಸುವ ಮೂಲಕ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡಿದ್ದೇನೆ ಎಂದು ಅವರು ತನ್ನ ಕಾರ್ಯದ ಬಗ್ಗೆ ನೆನಪಿಸಿದರು.

ಬಂಟ್ವಾಳ ರಸ್ತೆಯಲ್ಲಿ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ಬೈಪಾಸ್ ರಸ್ತೆ ನನ್ನ ಪ್ರಯತ್ನದ ಫಲವಾಗಿ ಆಗಿದೆ. ಇದು ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ನಾನು ಸುಳ್ಳು ಹೇಳಲಾರೆ‌. ತ್ಯಾಜ್ಯವನ್ನು ತಂದು ರಾಶಿ ಹಾಕುತ್ತಿದ್ದ ಸ್ಥಳದಲ್ಲಿ ಸುದಂರವಾದ ಉದ್ಯಾನವನ ಹಾಗೂ ಸಂಜೆಯ ವೇಳೆಗೆ ಪುತಸಭೆ ವ್ಯಾಪ್ತಿಯ ಜನರು ವಿಶ್ರಾಂತಿ ಪಡೆಯಲು ಟ್ರೀ ಪಾರ್ಕ್ ನಿರ್ಮಾಣ ಮಾಡಿರುವ ಹೆಮ್ಮೆ ನನಗಿದೆ ಎಂದರು. 

ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಒಳಚರಂಡಿ ಮಾಡುವ ಕನಸು ನನ್ನದಾಗಿತ್ತು. ಇದನ್ನು ಅನುಷ್ಠಾನಕ್ಕೆ ತರಲು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ‌. ಆದರೆ ಅಧಿಕಾರಿಗಳ ಬದ್ಧತೆಯ ಕೊರತೆಯಿಂದ ಅದು ಪೂರ್ತಿಯಾಗಿಲ್ಲ. ಇಂದು ಪುರಸಭೆಯ ಮೂಲೆ ಮೂಲೆಗಳಲ್ಲಿ ನಿರ್ಮಾಣವಾಗಿರುವ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆಗಳಿಗೆ ನಾನು ವಿಷೇಶ ಆದ್ಯತೆ ನೀಡಿದ್ದೇನೆ ಎಂದು ಅವರು ಹೇಳಿದರು. 

ಕಳೆದ ಎರಡೂವರೆ ವರ್ಷಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸವಾಲುಗಳನ್ನು ಎದುರಿಸಿ ಬಂಟ್ವಾಳ ಪುರಸಭೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಬೇಕು ಎಂದು ರಮಾನಾಥ ರೈ ಸಲಹೆ ನೀಡಿದರು. 

ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮುಹಮ್ಮದ್ ಶರೀಫ್ ಮಾತನಾಡಿ, ಮುಂದಿನ ಅವಧಿಯಲ್ಲಿ ಪುರಸಭೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ, ಸರ್ವ ಸದಸ್ಯರ ಸಹಕಾರ ಹಾಗೂ ನನ್ನ ವೈಯಕ್ತಿಕ ಅನುಭವದ ಮೂಲಕ ಮಾದರಿ  ಪುರಸಭೆ ಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. 

ಉಪಾಧ್ಯಕ್ಷೆ ಜೆಸಿಂತಾ ಮಾತನಾಡಿ, ರಮಾನಾಥ ರೈ ಅವರ ಮಾರ್ಗದರ್ಶನ ಮತ್ತು ಸ್ಪೂರ್ತಿಯಿಂದಾಗಿ ನಾನು ಜನಪ್ರತಿನಿಧಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಪದ್ಮಶೇಖರ್ ಜೈನ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಮಾಜಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಪುರಸಭಾ ಸದಸ್ಯರಾದ ಮುನೀಶ್ ಅಲಿ, ವಾಸು ಪೂಜಾರಿ, ಲುಕ್ಮಾನ್ ಬಿ.ಸಿ.ರೋಡ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತಾ.ಪಂ. ಸದಸ್ಯ ಸಂಜೀವ ಪೂಜಾರಿ, ಪುರಸಭೆಯ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಹಮ್ಮದ್ ನಂದರಬೆಟ್ಟು, ಪ್ರಮುಖರಾದ ಪಿ.ಎ.ರಹೀಂ, ಜಗದೀಶ್ ಕೊಯಿಲ, ಪದ್ಮನಾಭ ರೈ, ಜಯಂತಿ, ಪ್ರವೀಣ್ ಕಿಣಿ, ಬಿ‌.ಮೋಹನ್, ಜಗನ್ನಾಥ ತುಂಬೆ, ವೆಂಕಪ್ಪ ಪೂಜಾರಿ ಬಂಟ್ವಾಳ ಹಾಗೂ ಪುರಸಭೆಯ ಎಸ್ ಡಿಪಿಐ ಸದಸ್ಯರು, ಸಿಬ್ಬಂದಿ ಹಾಜರಿದ್ದರು. 

ಪುರಸಭಾ ಸಿಬ್ಬಂದಿ ರಝಾಕ್ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಕಾರ್ಯಕ್ರಮ ನಿರೂಪಿಸಿದರು. ಪುರಸಭಾ ಸದಸ್ಯ ವಾಸು ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News