ಗುಂಪು ಘರ್ಷಣೆ ಸಂದರ್ಭ ಬಿಜೆಪಿ ಕಾರ್ಯಕರ್ತನ ಥಳಿಸಿ ಹತ್ಯೆ

Update: 2020-11-18 15:29 GMT

ಕೂಚ್‌ಬಿಹಾರ,ನ.18: ಕೂಚ್‌ಬಿಹಾರ ಜಿಲ್ಲೆಯ ತೂಫಾನ್‌ಗಂಜ್ ಪ್ರದೇಶದಲ್ಲಿ ಬುಧವಾರ ಕಾಳಿದೇವಿಯ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ ಎರಡು ಸಮುದಾಯಗಳ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು,ಬಿಜೆಪಿ ಕಾರ್ಯಕರ್ತನೋರ್ವನನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು,ರಾಜ್ಯದ ಆಡಳಿತಾರೂಢ ಪಕ್ಷವು ಅದನ್ನು ನಿರಾಕರಿಸಿದೆ.

ಘರ್ಷಣೆಯಲ್ಲಿ ತೊಡಗಿದ್ದ ಎರಡು ಪ್ರತ್ಯೇಕ ಕ್ಲಬ್‌ಗಳಿಗೆ ಸೇರಿದ ಗುಂಪುಗಳನ್ನು ಸಮಾಧಾನಿಸಲು ಬಿಜೆಪಿ ಬೂತ್ ಕಾರ್ಯದರ್ಶಿ ಕಾಲಾಚಂದ ಕರ್ಮಾಕರ್ (55) ಪ್ರಯತ್ನಿಸಿದ್ದರು. ಆದರೆ ಉದ್ರಿಕ್ತ ಜನರು ಅವರನ್ನೇ ಥಳಿಸಿದ್ದರು. ನೆಲಕ್ಕೆ ಕುಸಿದು ಬಿದ್ದಿದ್ದ ಕರ್ಮಾಕರ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕೂಚ್‌ಬಿಹಾರ ಜಿಲ್ಲೆಯಲ್ಲಿ ತನ್ನ ನೆಲೆಯನ್ನು ಕಳೆದುಕೊಂಡಿರುವ ಟಿಎಂಸಿ, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಘಟಕವು ಆರೋಪಿಸಿದೆ. ಬಿಜೆಪಿ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಹಿರಿಯ ಟಿಎಂಸಿ ನಾಯಕ ಹಾಗೂ ಸಚಿವ ರವೀಂದ್ರನಾಥ ಘೋಷ್ ಅವರು, ಸ್ಥಳೀಯ ವಿವಾದ ಘಟನೆಗೆ ಕಾರಣವಾಗಿದ್ದು,ಪೊಲಿಸರು ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಿಜೆಪಿ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News