ಎಳೆಯರ ಅಕ್ರಮ ಬಂಧನ, ಚಿತ್ರ ಹಿಂಸೆ : ಉತ್ತರಪ್ರದೇಶ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-11-18 16:29 GMT

ಲಕ್ನೊ, ನ.18: ಪೌರತ್ವ ಕಾಯ್ದೆಯನ್ನು ವಿರೋಧಿಸಿ ರಾಜ್ಯದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಅಪ್ರಾಪ್ತ ವಯಸ್ಕರನ್ನು ಅಕ್ರಮವಾಗಿ ಬಂಧಿಸಿ ಚಿತ್ರಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಾಲನ್ಯಾಯ ಕಾಯ್ದೆ 2015ರ ಶಾಸನಬದ್ಧ ಅನುಸರಣೆಯಾಗುತ್ತಿದೆ ಎಂಬುದನ್ನು ದೃಢಪಡಿಸುವ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೂಚಿಸಿದೆ. ರಾಜ್ಯದಲ್ಲಿ ಹಲವು ಎಳೆಯರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಎಚ್‌ಎಕ್ಯೂ ಸೆಂಟರ್ ಫಾರ್ ಚೈಲ್ಡ್ ರೈಟ್ಸ್ ಎಂಬ ಸರಕಾರೇತರ ಸಂಸ್ಥೆಯೊಂದು ನ್ಯಾಯಾಲಯಕ್ಕೆ ದೂರು ನೀಡಿತ್ತು. ಉತ್ತರಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಸುಮಾರು 41 ಎಳೆಯರನ್ನು ಬಂಧಿಸಿ ಕಸ್ಟಡಿಯಲ್ಲಿ ಚಿತ್ರಹಿಂಸೆಗೆ ಒಳಪಡಿಸಲಾಗಿದೆ ಎಂದು ಎನ್‌ಜಿಒ ಸಂಸ್ಥೆಯ ಸತ್ಯಶೋಧನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಾಲನ್ಯಾಯ ಕಾಯ್ದೆಯ ಅನುಸರಣೆಯ ಬಗ್ಗೆ ರಾಜ್ಯಸರಕಾರ ಮಾಹಿತಿ ನೀಡಬೇಕು ಎಂದು ತಿಳಿಸಿತ್ತಲ್ಲದೆ ಬಾಲನ್ಯಾಯ ಕಾಯ್ದೆಯ ಅನುಷ್ಠಾನದ ಬಗ್ಗೆ ಮೇಲುಸ್ತುವಾರಿ ವಹಿಸಲು ಸಮಿತಿಯೊಂದರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು ಮತ್ತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ನಿಗದಿಗೊಳಿಸಿತು. ರಾಜಕೀಯ ಮೆರವಣಿಗೆ, ಕಾರ್ಯಕ್ರಮದ ಸಂದರ್ಭ ಖಾಸಗಿ ಅಥವಾ ಸರಕಾರಿ ಆಸ್ತಿಪಾಸ್ತಿಗೆ ಹಾನಿಯಾದರೆ ಆ ನಷ್ಟವನ್ನು ವಸೂಲು ಮಾಡುವ ಉದ್ದೇಶದ ‘ಯುಪಿ ರಿಕವರಿ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟೀಸ್ ಆರ್ಡಿನೆನ್ಸ್ 2020’ಕ್ಕೆ ಉತ್ತರ ಪ್ರದೇಶ ಸರಕಾರ ಅಂಗೀಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News