ಭಟ್ಕಳದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಕೋವಿಡ್ ಟೆಸ್ಟ್

Update: 2020-11-18 16:44 GMT

ಭಟ್ಕಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಂಜುಮನ್ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಕೋವಿಡ್ 19 ಟೆಸ್ಟ್ ನಡೆಯಿತು.

ಭಟ್ಕಳ ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳು ಕಾಲೇಜಿಗೆ ಬಂದು ಕಾಲೇಜಿನ ಸಿಬ್ಬಂದಿಗಳ ಹಾಗೂ ಬಿಎ, ಬಿಎಸ್ಸಿ, ಬಿಕಾಂ ಮತ್ತು ಎಂಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹಿಸಿದರು. ಕಾಲೇಜಿನ ಪ್ರಾಧ್ಯಾಪಕ ವರ್ಗ ಮತ್ತು ಕಚೇರಿ ಸಿಬ್ಬಂದಿಗಳು ಎಲ್ಲರೂ ಹಾಜರಿದ್ದು ಟೆಸ್ಟ್ ಮಾಡಿಸಿಕೊಂಡರು.

ಆಫ್‍ಲೈನ್ ತರಗತಿಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸೂಚಿಸಿದ ಮಾರ್ಗಸೂಚಿಯಂತೆ ಅಗತ್ಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲೇಜಿನ ತರಗತಿಕೋಣೆಗಳನ್ನೆಲ್ಲ ಸ್ವಚ್ಚಗೊಳಿಸಿ, ಸೆನಿಟೈಜ್ ಮಾಡಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಮಾಸ್ಕ್ ಧರಿಸಿ, ದೈಹಿಕ ಅಂತರವನ್ನು ಕಾಪಾಡಿಕೊಂಡು ತರಗತಿಗಳಿಗೆ ಹಾಜರಾಗಬಹುದು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ಪದವಿ ತರಗತಿಗಳು ಆರಂಭ:  8 ತಿಂಗಳ ಸುದೀರ್ಘ ಕೊರೋನ ತಡೆ ಲಾಕ್‍ಡೌನ್ ನಂತರ ಸರಕಾರ ಮಂಗಳವಾರದಿಂದ ಪದವಿ ಕಾಲೇಜು ( ಅಂತಿಮ ವರ್ಷ) ಆರಂಭವಾಗಿದ್ದು, ತಾಲೂಕಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಕಾಲಿಡದೇ ದೂರವೇ ಉಳಿದರು.

ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಕಾದು ಕುಳಿತರಾದರೂ, ಅಲ್ಲೊಬ್ಬ, ಇಲ್ಲೊಬ್ಬ ವಿದ್ಯಾರ್ಥಿ ಕಾಲೇಜಿನ ಬಳಿ ಸುಳಿದು ಮಾಯವಾದರು. ತಾಲೂಕಿನ ವಿವಿಧ ಪದವಿ ಕಾಲೇಜುಗಳ ಪೈಕಿ ಭಟ್ಕಳ ಸಿದ್ಧಾರ್ಥ ಪದವಿ ಕಾಲೇಜಿಗೆ ಮಂಗಳವಾರ 75 ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇನ್ನುಳಿದಂತೆ ಮುರುಡೇಶ್ವರ ಆರ್.ಎನ್.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50% ದಾಟಿಲ್ಲ. ಭಟ್ಕಳ ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ವಾಪಸ್ಸಾಗಿದ್ದಾರೆ. ಅಂಜುಮನ್ ಪದವಿ ಕಾಲೇಜು ಹಾಗೂ ಭಟ್ಕಳ ಸರಕಾರಿ ಪದವಿ ಕಾಲೇಜಿನ ಸ್ಥಿತಿಯೂ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News