ದಿಲ್ಲಿ: 5 ಲಕ್ಷದ ಗಡಿ ದಾಟಿದ ಕೊರೋನ ಪ್ರಕರಣ
ಹೊಸದಿಲ್ಲಿ, ನ.19: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 7,486 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿದಾಟಿದೆ. 133 ಮಂದಿ ಬುಧವಾರ ಮೃತಪಟ್ಟಿದ್ದು, ಇದುವರೆಗೆ ದಿನವೊಂದರಲ್ಲಿ ಸಂಭವಿಸಿದ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 7,943ಕ್ಕೇರಿದೆ.
ರಾಜಧಾನಿಯಲ್ಲಿ ಮಂಗಳವಾರ 62 ಸಾವಿರ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಶೇಕಡ 12.03ರಷ್ಟು ಧನಾತ್ಮಕತೆ ದರ ಇರುವುದು ಪತ್ತೆಯಾಗಿದೆ. ಹಬ್ಬದ ಸೀಸನ್ ಹಾಗೂ ಮಿತಿಮೀರುತ್ತಿರುವ ಮಾಲಿನ್ಯ ಸಮಸ್ಯೆ ಸಾಂಕ್ರಾಮಿಕದ ತೀವ್ರತೆಗೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ ದಿನದ ಗರಿಷ್ಠ ಅಂದರೆ 8,593 ಪ್ರಕರಣ ನವೆಂಬರ್ 11ರಂದು ದಾಖಲಾಗಿತ್ತು.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 42,004ರಿಂದ 42,458ಕ್ಕೇರಿದೆ. ಒಟ್ಟು ಪ್ರಕರಣಗಳ ಸಂಖ್ಯೆ 5,03,084 ಆಗಿದೆ. ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲ ಮಾರುಕಟ್ಟೆ ಲಾಕ್‌ಡೌನ್ ಸೇರಿದಂತೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಎರಡು ಕೋಟಿ ಜನಸಂಖ್ಯೆ ಇರುವ ದಿಲ್ಲಿಯಲ್ಲಿ ಭಿನ್ನ ಪರಿಸ್ಥಿತಿ ಇದೆ. ಈ ಮಧ್ಯೆ ಜನ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.