ಪ್ರಪ್ರಥಮ ಬಾರಿಗೆ ಅವಧಿಗಿಂತ ಮೊದಲೇ ಭಡ್ತಿ ಪಡೆದ ಈ ಮಹಿಳಾ ಪೊಲೀಸ್ ಅಧಿಕಾರಿ
ಹೊಸದಿಲ್ಲಿ, ನ.19: ಕಾಣೆಯಾಗಿದ್ದ 76 ಮಕ್ಕಳನ್ನು ಸುಮಾರು 3 ತಿಂಗಳಲ್ಲಿ ಪತ್ತೆಹಚ್ಚಿದ ಸಾಧನೆ ಮಾಡಿರುವ ದಿಲ್ಲಿಯ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಸೀಮಾ ಡಾಕಾರಿಗೆ ಹೊಸ ಪ್ರೋತ್ಸಾಹಕ ಯೋಜನೆಯಡಿಯಲ್ಲಿ ವಿಶೇಷ ಭಡ್ತಿ ನೀಡಲಾಗಿದೆ.
ವಾಯವ್ಯ ದಿಲ್ಲಿಯ ಸಮಯ್‌ಪುರ ಬದ್ಲಿ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಸೀಮಾ, ದಿಲ್ಲಿ ಪೊಲೀಸ್ ಇಲಾಖೆ ಘೋಷಿಸಿರುವ ನೂತನ ಪ್ರೋತ್ಸಾಹಕ ಯೋಜನೆಯಡಿ ವಿಶೇಷ ಭಡ್ತಿ ಪಡೆದ ದಿಲ್ಲಿಯ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರು ಪತ್ತೆಹಚ್ಚಿರುವ 76 ಮಕ್ಕಳಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕೆಳಹರೆಯದವರು. ಇವರನ್ನು ದಿಲ್ಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಪತ್ತೆ ಹಚ್ಚುವಲ್ಲಿ ಸೀಮಾ ಡಾಕಾ ಪ್ರಾಮಾಣಿಕ ಶ್ರಮವಹಿಸಿದ್ದಾರೆ ಎಂದು ಇಲಾಖೆಯ ಪ್ರಕಟನೆಯಲ್ಲಿ ಶ್ಲಾಘಿಸಲಾಗಿದೆ. ಪೊಲೀಸ್ ಆಯುಕ್ತ ಎಸ್‌ಎನ್ ಶ್ರೀವಾಸ್ತವ, ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಸೇರಿದಂತೆ ಹಲವು ಪ್ರಮುಖರು ಸೀಮಾರ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಮನೆಯಿಂದ ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಪ್ರೇರೇಪಿಸುವ ಉದ್ದೇಶದಿಂದ 2020ರ ಆಗಸ್ಟ್ 5ರಿಂದ ಹೊಸ ಪ್ರೋತ್ಸಾಹಕ ಯೋಜನೆಯನ್ನು ಪೊಲೀಸ್ ಆಯುಕ್ತರು ಅನುಷ್ಠಾನಗೊಳಿಸಿದ್ದಾರೆ. ನಾಪತ್ತೆಯಾಗಿರುವ 14 ವರ್ಷಕ್ಕಿಂತ ಕೆಳಹರೆಯದ 50ಕ್ಕೂ ಹೆಚ್ಚು ಮಕ್ಕಳನ್ನು (ಇವರಲ್ಲಿ 15 ಮಕ್ಕಳು 8 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು) 1 ವರ್ಷದೊಳಗೆ ಪತ್ತೆಹಚ್ಚಿದ ಕಾನ್‌ಸ್ಟೇಬಲ್/ಹೆಡ್‌ಕಾನ್‌ಸ್ಟೇಬಲ್ ಈ ಪ್ರೋತ್ಸಾಹಕ ಯೋಜನೆಗೆ ಅರ್ಹರಾಗುತ್ತಾರೆ.
ಹೊಸ ಯೋಜನೆಯು ನಾಪತ್ತೆಯಾದ ಮಕ್ಕಳನ್ನು ಪತ್ತೆಹಚ್ಚುವ ಹಾಗೂ ಅವರನ್ನು ರಕ್ಷಿಸುವ ಕಾರ್ಯದಲ್ಲಿ ಅಪಾರ ಪ್ರಗತಿ ಸಾಧಿಸಲು ನೆರವಾಗಿದೆ. ಮಕ್ಕಳನ್ನು ರಕ್ಷಿಸುವ ಮೂಲಕ ಪೊಲೀಸರು ದುಃಖತಪ್ತ ಕುಟುಂಬದವರ ಮುಖದಲ್ಲಿ ಮಂದಹಾಸ ಮರಳಿಸುವ ಜೊತೆಗೆ ಸಮಾಜಬಾಹಿರ ಕೃತ್ಯದಲ್ಲಿ ತೊಡಗುವವರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.