ಬಿಹಾರದ ನೂತನ ಶಿಕ್ಷಣ ಸಚಿವರಿಗೆ "ರಾಷ್ಟ್ರಗೀತೆ ಸರಿಯಾಗಿ ಗೊತ್ತಿಲ್ಲ": ವೀಡಿಯೋ ಶೇರ್ ಮಾಡಿದ ಆರ್ ಜೆ ಡಿ

Update: 2020-11-19 07:00 GMT

ಪಾಟ್ನಾ: ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರಕಾರಕ್ಕೆ ನೂತನ ಶಿಕ್ಷಣ ಸಚಿವರಾಗಿ ನೇಮಕಗೊಂಡಿರುವ ಮೇವಾಲಾಲ್ ಚೌಧುರಿ ರಾಷ್ಟ್ರಗೀತೆ ಹಾಡುವಾಗ ತಡಬಡಿಸುತ್ತಿರುವ ವೀಡಿಯೋವೊಂದನ್ನು ಆರ್ ಜೆ ಡಿ ಬುಧವಾರ ಪೋಸ್ಟ್ ಮಾಡಿದೆ. ಈ ವೀಡಿಯೋ ಯಾವಾಗ ತೆಗೆಯಲಾಗಿದೆ ಎಂದು ತಿಳಿದಿಲ್ಲವಾದರೂ ಮೇವಾಲಾಲ್ ಅವರ ಸುತ್ತ ಮಕ್ಕಳು ಹಾಗೂ ದೊಡ್ಡವರು ಇರುವುದು ಕಾಣಿಸುತ್ತದೆ. ಈ 38 ಸೆಕೆಂಡ್ ಅವಧಿಯ ವೀಡಿಯೋದ ಅಂತ್ಯದಲ್ಲಿ ಅವರು 'ಭಾರತ್ ಮಾತಾ ಕಿ ಜೈ' ಹಾಗೂ ವಂದೇ ಹೇಳಿದಾಗ ನೆರೆದಿದ್ದ ಮಕ್ಕಳು 'ಮಾತರಂ' ಹೇಳುವುದು ಕೇಳಿಸುತ್ತದೆ.

"ಹಲವಾರು ಭಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಿಹಾರ ಶಿಕ್ಷಣ ಸಚಿವ ಮೇವಾಲಾಲ್ ಚೌಧುರಿಗೆ ರಾಷ್ಟ್ರಗೀತೆ ಕೂಡ ಸರಿಯಾಗಿ ಗೊತ್ತಿಲ್ಲ, ನಿತೀಶ್ ಕುಮಾರ್ ಜೀ ಇನ್ನೂ ಏನಾದರೂ ನಾಚಿಕೆ ಉಳಿದಿದೆಯೇ? ನಿಮ್ಮ ಆತ್ಮಸಾಕ್ಷಿ ಎಲ್ಲಿ ಮುಳುಗಿ ಹೋಯಿತು?,'' ಎಂದು ಆರ್ ಜೆ ಡಿ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

67 ವರ್ಷದ ಮೇವಾಲಾಲ್ ಅವರನ್ನು 2017ರಲ್ಲಿ ನಿತೀಶ್ ಸರಕಾರದಿಂದ ವಜಾಗೊಳಿಸಲಾಗಿತ್ತು. ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿನ ಬಿಹಾರ ಕೃಷಿ ವಿವಿಯಲ್ಲಿ ಅವರು ಅಲ್ಲಿನ ಉಪಕುಲಪತಿಯಾಗಿದ್ದಾಗ ನೇಮಕಾತಿಗಳಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಸಂಬಂಧ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಅವರು ನಿರಾಕರಿಸಿದ್ದರು.

ರಾಜ್ಯದಲ್ಲಿ ಅಧಿಕಾರವುಳಿಸಲು ಕ್ರಿಮಿನಲ್‍ಗಳನ್ನು ನಿತೀಶ್ ಕುಮರ್ ನೇಮಕಗೊಳಿಸುತ್ತಿದ್ದಾರೆಂದು ಸರಣಿ ಟ್ವೀಟ್‍ಗಳಲ್ಲಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

"ಅಧಿಕಾರ ಕ್ರಿಮಿನಲ್‍ಗಳನ್ನು ರಕಿಸುತ್ತಿದೆ. ಮೇವಾಲಾಲ್ ಚೌಧುರಿ ಅವರನ್ನು ನೇಮಕಗೊಳಿಸುವ ಮೂಲಕ ಮುಖ್ಯಮಂತ್ರಿ ಲೂಟಿ ಹಾಗೂ ಕಳ್ಳತನಕ್ಕೆ ವಿನಾಯಿತಿ ನೀಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಯಾರನ್ನೂ ಅವರು ಸಚಿವರನ್ನಾಗಿಸಿಲ್ಲ,'' ಎಂದು ತೇಜಸ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News