×
Ad

ಕುಂದಾಪುರ: ಮೀಸಲು ಅರಣ್ಯದಲ್ಲಿ ಬೇಟೆಗೆ ಸಂಚು; ವಾಹನ ವಶ, ಆರೋಪಿಗಳು ಪರಾರಿ

Update: 2020-11-19 16:16 IST

ಕುಂದಾಪುರ, ನ.19: ಹರ್ಕೂರು ಮೀಸಲು ಅರಣ್ಯದಲ್ಲಿ ನ.19ರಂದು ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೇಟೆಗೆ ಸಂಚು ರೂಪಿಸುತ್ತಿದ್ದ ದುಷ್ಕರ್ಮಿಗಳ ವಾಹನವನ್ನು ಕುಂದಾಪುರ ವಲಯ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ಮೀಸಲು ಅರಣ್ಯದಲ್ಲಿ ಬೇಟೆಯಾಡುವ ಉದ್ದೇಶದಿಂದ ದುಷ್ಕರ್ಮಿಗಳು, ವಾಹನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಸಂಚು ರೂಪಿಸುತ್ತಿದ್ದರೆನ್ನಲಾಗಿದೆ. ಈ ಕುರಿತ ಖಚಿತ ಮಾಹಿತಿ ಪಡೆದ ಕುಂದಾಪುರ ವಲಯ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.

 ಈ ಸಂದರ್ಭದಲ್ಲಿ ದುಷ್ಕರ್ಮಿಗಳು ವಾಹನದಲ್ಲಿ ಪರಾರಿ ಯಾಗಲು ಯತ್ನಿಸಿದ್ದಾರೆ. ವಾಹನವನ್ನು ಇಲಾಖೆಯವರು ಹರ್ಕೂರು ಮಾರ್ಗವಾಗಿ ಬಗ್ವಾಡಿ ಕ್ರಾಸ್ ಹಾಗೂ ಮುಳ್ಳಿಕಟ್ಟೆ ವ್ಯಾಪ್ತಿಯ 15 ಕಿ.ಮೀ. ದೂರದವರೆಗೆ ಬೆನ್ನಟ್ಟಿದರು. ಕೆಂಚನೂರು ಬಳಿ ಬೊಲೆರೋ ವಾಹನ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಅದರಲ್ಲಿದ್ದವರು ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ವಾಹನ ಮತ್ತು ಅದರಲ್ಲಿದ್ದ ಕಬ್ಬಿಣದ ರಾಡು, ಟರ್ಪಾಲು, ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ.

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ದಿಲೀಪ್, ಅರಣ್ಯ ರಕ್ಷಕರಾದ ಮಂಜುನಾಥ ನಾಯ್ಕಾ, ಬಂಗಾರಪ್ಪ, ಜೀಪು ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News