'ಅಸ್ಪೃಶ್ಯರಲ್ಲದವರಿಗೆ ಪರಿಶಿಷ್ಟ ಜಾತಿ ನಕಲಿ ಪ್ರಮಾಣ ಪತ್ರ' : ದಸಂಸ ಅಂಬೇಡ್ಕರ್ ವಾದ ಆರೋಪ
ಉಡುಪಿ, ನ.19: ಉಡುಪಿ ಜಿಲ್ಲಾದ್ಯಂತ ಅಸ್ಪೃಶ್ಯರಲ್ಲದ ಜಾತಿಗಳಿಗೆ ಪರಿಶಿಷ್ಟ ಜಾತಿ ನಕಲಿ ಪ್ರಮಾಣ ಪತ್ರವನ್ನು ನೀಡುತ್ತಿರುವ ಕಂದಾಯ ಇಲಾಖೆ ಹಾಗೂ ಉಡುಪಿ ತಹಶೀಲ್ದಾರ್ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಉಡುಪಿ ಜಿಲ್ಲೆಯಲ್ಲಿ ನೆಲೆಸದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದ ವಡ್ಡರ ಬೋವಿ ಮತ್ತು ಸ್ಪರ್ಶ ಬೋವಿಗಳ ಜೀವನ ಪದ್ಧತಿ, ಸಾಮಾಜಿಕ ವ್ಯವಸ್ಥೆ ಹಾಗೂ ಮೊಗವೀರ ಮತ್ತು ಮೊಗೇರ, ದಾಸ ಮತ್ತು ದಾಸಯ್ಯ ಇವರ ಸಾಮಾಜಿಕ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಾಸವಿದ್ದು, ಇವರ ಸಾಮಾಜಿಕ ಜೀವನ ಪದ್ಧತಿಗಳನ್ನು ಸರಿಯಾಗಿ ಮಹಜರು ಮಾಡದೆ ಸ್ಪರ್ಶ ಜಾತಿಗಳಿಗೆ ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಉಡುಪಿ ತಹಶೀಲ್ದಾರರು ರಾಜಕೀಯ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ಇತ್ತೀಚೆಗೆ ಬೋವಿ ಜನಾಂಗಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದಸಂಸ ದೂರಿದೆ.
ಸರಕಾರ ಸುತ್ತೋಲೆ ಪ್ರಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡುವಾಗ ಸರಿಯಾಗಿ ಮಹಜರು ಮಾಡುತ್ತಿಲ್ಲ. ಸೂಕ್ತ ತನಿಖೆ ನಡೆಸದೆ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಆದುದರಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದ ಜಾತಿಗಳಿಗೆ ಈಗಾಗಲೇ ನೀಡಿರುವ ಬೋವಿ ಇನ್ನಿತರ ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಅವರಿಗೆ ನೀಡಲಾಗಿರುವ ಮೀಸಲಾತಿ ಸೌಲಭ್ಯಗಳನ್ನು ಕೂಡಲೇ ತಡೆಹಿಡಿಯಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿರುವ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್‌ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಗೋಪಾಲ ಕೃಷ್ಣ ಕುಂದಾಪುರ, ಅಣ್ಣಪ್ಪನಕ್ರೆ ಕಾರ್ಕಳ, ಭಾಸ್ಕರ್ ಮಾಸ್ತರ್, ಮಂಜುನಾಥ ಬಾಳ್ಕುದ್ರು, ಶ್ರೀಧರ ಕುಂಜಿಬೆಟ್ಟು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.