ಉಡುಪಿ : ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ ಉದ್ಘಾಟನೆ
ಉಡುಪಿ, ನ.19: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಪ್ತಾಹದ ಉದ್ಘಾಟನೆ ಹಾಗೂ ಪುಸ್ತಕ ಪ್ರದರ್ಶನ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷರಾದ ಸುಮಿತ್ರಾ ಆರ್. ನಾಯಕ್ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಗ್ರಂಥಾಲಯ ಎಂಬುದು ಓದುಗರಿಗೆ ತವರು ಮನೆ ಇದ್ದಂತೆ. ವಿದ್ಯಾರ್ಥಿಗಳು ಉಡುಪಿ ನಗರಕೇಂದ್ರದ ಸುಸಜ್ಜಿತ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಿರಿಯ ಸಾಹಿತಿ ಇಂದಿರಾ ಹಾಲಂಬಿ ಮಾತನಾಡಿ, ಪುಸ್ತಕ ಪ್ರಿಯರಿಗೆ ಗ್ರಂಥಗಳೇ ಸಂಪತ್ತು. ಸಾಹಿತಿಗಳಿಗೆ ಓದುಗರ ಪ್ರೀತಿಯೇ ಪ್ರಶಸ್ತಿ ಇದ್ದಂತೆ ಎಂದು ಗ್ರಂಥಾಲಯ ಹಾಗೂ ಓದುಗರ ನಡುವಿನ ಸಂಬಂಧವನ್ನು ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಇಂದಿರಾ ಹಾಲಂಬಿ ಹಾಗೂ ಉರಗ ತಜ್ಞ, ಸಮಾಜಸೇವಕ ಗುರುರಾಜ್ ಸನಿಲ್‌ರನ್ನು ಸನ್ಮಾನಿಸಲಾ ಯಿತು. ಗುರುರಾಜ್ ಸನಿಲ್ ಮಾತನಾಡಿ, ಹಾವುಗಳು ಸಹ ನಮ್ಮಾಂದಿಗೆ ಪ್ರಕೃತಿಯ ಸಹಜೀವಿಗಳು. ಇವುಗಳ ಬಗ್ಗೆ ಇರುವ ಭಯ ತೊರೆಯ ಬೇಕು ಹಾಗೂ ಎಲ್ಲರೂ ಪರಿಸರ ಪ್ರೀತಿ, ಕಾಳಜಿಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಉಪಸ್ಥಿತ ರಿದ್ದರು. ಉಡುಪಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇಮ ಎಂ. ಕಾರ್ಯಕ್ರಮ ನಿರೂಪಿಸಿ ಸುನೀತಾ ವಂದಿಸಿದರು.