ಕಾಮ್ರಾ ಟ್ವೀಟ್ ಪ್ರಕರಣ: ಟ್ವಿಟರ್ ಪಾಲಿಸಿ ಮುಖ್ಯಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಸಂಸದೀಯ ಸಮಿತಿ

Update: 2020-11-19 12:37 GMT

ಹೊಸದಿಲ್ಲಿ : ಸುಪ್ರೀಂ ಕೋರ್ಟ್ ವಿರುದ್ಧ ಇತ್ತೀಚೆಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಮಾಡಿದ್ದ ಕೆಲವೊಂದು 'ನಿಂದನಾತ್ಮಕ ಟ್ವೀಟ್‍'ಗಳನ್ನು ಟ್ವಿಟರ್ ತೆಗೆದು ಹಾಕದೇ ಇದ್ದುದನ್ನು ಇಂದು ಬಿಜೆಪಿಯ ಮೀನಾಕ್ಷಿ ಲೇಖಿ ನೇತೃತ್ವದ ವೈಯಕ್ತಿಕ ಡಾಟಾ ಸಂರಕ್ಷಣಾ ಮಸೂದೆ ಕುರಿತಾದ ಸಂಸದೀಯ ಸಮಿತಿಯೊಂದು ಟ್ವಿಟರ್ ನ ಪಾಲಿಸಿ ಮುಖ್ಯಸ್ಥೆ ಮಹಿಲಾ ಕೌಲ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಮೀನಾಕ್ಷಿ ಲೇಖಿ ಜತೆಗೆ ಸಮಿತಿಯಲ್ಲಿರುವ ಕಾಂಗ್ರೆಸ್ ನಾಯಕ ವಿವೇಕ್ ತನ್ಖಾ ಕೂಡ ಟ್ವಿಟರ್ ನ ಉನ್ನತ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆಂದು ವರದಿಯಾಗಿದೆ.

ಆರ್ಕಿಟೆಕ್ಟ್ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ  ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಕ್ರಮವನ್ನು ಖಂಡಿಸಿ ಅತ್ಯುನ್ನತ ನ್ಯಾಯಾಲಯವನ್ನು ಗುರಿಯಾಗಿಸಿ ಸರಣಿ ಟ್ವೀಟ್ ಮಾಡಿ ಕುನಾಲ್ ಕಾಮ್ರಾ ಇತ್ತೀಚೆಗೆ ವಿವಾದಕ್ಕಿಡಾಗಿದ್ದರು.

ಲಡಾಖ್ ಅನ್ನು ಚೀನಾದ ಭಾಗವಾಗಿ ಜಿಯೋ ಟ್ಯಾಗ್ ಮಾಡಿ ಟ್ವಿಟರ್ ಈಗಾಗಲೇ ಸಮಸ್ಯೆಯನ್ನು ಮೈಗೆಳೆದುಕೊಂಡಿದೆಯಲ್ಲದೆ ತಪ್ಪನ್ನು ನವೆಂಬರ್ 30ರೊಳಗೆ ಸರಿ ಪಡಿಸುವ ಭರವಸೆ ನೀಡಿದೆ. ಈ ಪ್ರಮಾದ ಕುರಿತಂತೆ ಕ್ಷಮಾಪಣೆ ಪತ್ರವನ್ನೂ ಟ್ವಿಟರ್ ನ ಚೀಫ್ ಪ್ರೈವೆಸಿ ಆಫೀಸರ್ ಡೇಮಿಯನ್ ಕೀರನ್ ಇತ್ತೀಚೆಗೆ ಸಮಿತಿಗೆ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News