ದಿಲ್ಲಿ: ಮಾಸ್ಕ್ ಧರಿಸದವರಿಗೆ ದಂಡ ಹೆಚ್ಚಳ

Update: 2020-11-19 13:07 GMT

ಹೊಸದಿಲ್ಲಿ, ನ.19: ದಿಲ್ಲಿಯಲ್ಲಿ ಕೊರೋನ ಸೋಂಕನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರಕಾರ, ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದ ಪ್ರಮಾಣವನ್ನು 500 ರೂ.ಯಿಂದ 2,000 ರೂ.ಗೆ ಹೆಚ್ಚಿಸಿದೆ. ಅಲ್ಲದೆ, ಚಳಿಗಾಲದ ಆರಂಭ ಮತ್ತು ವಾಯುಮಾಲಿನ್ಯ ಅಧಿಕಗೊಂಡಿರುವ ಕಾರಣ ದಿಲ್ಲಿಯಲ್ಲಿ ಸೋಂಕು ಹೆಚ್ಚುವ ಸಾಧ್ಯತೆಯಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಮಾಸ್ಕ್ ವಿತರಿಸುವಂತೆ ಎಲ್ಲಾ ರಾಜಕೀಯ ಪಕ್ಷ ಹಾಗೂ ಸಾಮಾಜಿಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

ಹಬ್ಬದ ಸಂದರ್ಭ ದಿಲ್ಲಿಯಲ್ಲಿ ಕೊರೋನ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದಿಲ್ಲಿಯಲ್ಲಿ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನಿಯೋಜನೆಯ ಜೊತೆಗೆ ಆಸ್ಪತ್ರೆಯಲ್ಲಿ ಬೆಡ್‌ಗಳ ಪ್ರಮಾಣವನ್ನೂ ಹೆಚ್ಚಿಸಿದೆ. ದಿಲ್ಲಿ ಸರಕಾರದ ಅಧೀನದ ಆಸ್ಪತ್ರೆಗಳಲ್ಲಿ 663 ಮತ್ತು ಕೇಂದ್ರ ಸರಕಾರದ ಅಧೀನದ ಆಸ್ಪತ್ರೆಗಳಲ್ಲಿ 750 ಐಸಿಯು ಬೆಡ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 60ಶೇ. ಐಸಿಯು ರಹಿತ ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ 80ಶೇ. ಐಸಿಯು ಹಾಸಿಗೆಗಳನ್ನು ಮೀಸಲಿಡುವ ಆದೇಶ ಗುರುವಾರದಿಂದ ಜಾರಿಗೆ ಬಂದಿದೆ ಎಂದವರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ರಾಜಕೀಯ ನಡೆಸಲು ಇದು ಕಾಲವಲ್ಲ. ರಾಜಕೀಯವನ್ನು ಬದಿಗಿರಿಸಿ ಎಲ್ಲರೂ ಒಗ್ಗಟ್ಟಾಗಿ ಜನರ ಹಿತರಕ್ಷಿಸುವ ಅಗತ್ಯವಿದೆ ಎಂದರು. ಬುಧವಾರ ಸಂಜೆಯವರೆಗಿನ ಮಾಹಿತಿಯಂತೆ, ಕಳೆದ 24 ಗಂಟೆಯ ಅವಧಿಯಲ್ಲಿ ದಿಲ್ಲಿಯಲ್ಲಿ 7,486 ಹೊಸ ಸೋಂಕು ಪ್ರಕರಣ ವರದಿಯಾಗುವುದರೊಂದಿಗೆ ಸೋಂಕಿನ ಪ್ರಮಾಣ 5 ಲಕ್ಷದ ಗಡಿ ದಾಟಿದೆ. ಮೃತರ ಸಂಖ್ಯೆ 7,043ಕ್ಕೇರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News