ಮುಂಬೈ ದಾಳಿಯ ರೂವಾರಿ ಹಫೀಝ್ ಸಯೀದ್‌ಗೆ 10 ವರ್ಷ ಜೈಲುಶಿಕ್ಷೆ

Update: 2020-11-19 13:31 GMT

ಹೊಸದಿಲ್ಲಿ, ನ.19: ಮುಂಬೈ ದಾಳಿಯ ಸಂಚು ರೂಪಿಸಿದ ರೂವಾರಿ, ಭಯೋತ್ಪಾದಕ ಸಂಘಟನೆ ಎಲ್‌ಇಟಿಯ ಸಹಸಂಸ್ಥೆ ಜೆಯುಡಿ ಮುಖ್ಯಸ್ಥ ಹಫೀಝ್ ಸಯೀದ್‌ಗೆ ಎರಡು ಭಯೋತ್ಪಾದಕ ಪ್ರಕರಣಗಳಲ್ಲಿ ಪಾಕಿಸ್ತಾನದ ನ್ಯಾಯಾಲಯ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಪಿಟಿಐ ಸುದ್ಧಿಸಂಸ್ಥೆ ವರದಿ ಮಾಡಿದೆ. ಲಾಹೋರ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಜಮಾಅತುದಅವಾ (ಜೆಯುಡಿ)ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಸಹಿತ ನಾಲ್ವರು ಮುಖಂಡರನ್ನು ಇನ್ನೂ ಎರಡು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಪಡಿಸಿದೆ .

ಸಯೀದ್ ಮತ್ತು ಆತನ ಇಬ್ಬರು ಸಹಚರರಾದ ಝಾಫರ್ ಇಕ್ಬಾಲ್ ಮತ್ತು ಯಾಹ್ಯ ಮುಜಾಹಿದ್‌ಗೆ 10 ವರ್ಷ 6 ತಿಂಗಳು ಜೈಲುಶಿಕ್ಷೆ, ಮೈದುನ ಅಬ್ದುಲ್ ರಹ್ಮಾನ್ ಮಕ್ಕಿಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲಿ ಸಯೀದ್ ಹಾಗೂ ಆತನ ಕೆಲವು ಸಹಚರರಿಗೆ ನ್ಯಾಯಾಲಯ 11 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2008ರ ನವೆಂಬರ್ 26ರಂದು ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಸಂಚುಕೋರನಾಗಿರುವ ಹಫೀಝ್ ಸಯೀದ್‌ನನ್ನು ಅಮೆರಿಕ ಮತ್ತು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದು ಅಮೆರಿಕ ದೇಶ ಈತನ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಪಾಕ್ ಮೇಲೆ ಅಂತರ್ ರಾಷ್ಟ್ರೀಯ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈಯಲ್ಲಿ ಈತನನ್ನು ಬಂಧಿಸಿ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿಡಲಾಗಿದೆ.

ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ 166 ಜನ ಮೃತಪಟ್ಟಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 10 ಉಗ್ರರನ್ನೂ ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಇಲಾಖೆಯು ಜೆಯುಡಿ ಸಂಘಟನೆಯ ಮುಖಂಡರ ವಿರುದ್ಧ 41 ಪ್ರಕರಣಗಳನ್ನು ದಾಖಲಿಸಿದ್ದು ಹಫೀಝ್ ಸಯೀದ್ ವಿರುದ್ಧ ದಾಖಲಿಸಿರುವ ಪ್ರಕರಣಗಳಲ್ಲಿ 4 ಪ್ರಕರಣದ ಬಗ್ಗೆ ತೀರ್ಪು ಹೊರಬಿದ್ದಿದ್ದು ಉಳಿದ ಪ್ರಕರಣಗಳ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ. ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಿರುವ ಉಗ್ರರ ವಿರುದ್ಧ ಅಲ್ಲಿನ ಸರಕಾರ ಕ್ರಮ ಕೈಗೊಳ್ಳುವಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕರ ಆರ್ಥಿಕ ನೆರವಿನ ಕುರಿತು ನಿಗಾ ವಹಿಸಿರುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) ಪ್ರಮುಖ ಪಾತ್ರ ವಹಿಸಿದೆ.

ಪಾಕಿಸ್ತಾನದ ಕೆಲವು ಸಂಘಟನೆಗಳು ಜೈಷೆ ಮುಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ಬಗ್ಗೆ ಭಾರತವು ಎಫ್‌ಎಟಿಎಫ್‌ಗೆ ಸಾಕ್ಷ್ಯಾಧಾರದ ಸಹಿತ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ , ಎಫ್‌ಎಟಿಎಫ್‌ನ ಕಪ್ಪುಪಟ್ಟಿಗೆ ಸೇರ್ಪಡೆಯಾಗಬಹುದು ಎಂಬ ಭೀತಿಯಲ್ಲಿ ಪಾಕಿಸ್ತಾನ ಉಗ್ರರ ವಿರುದ್ದ ಕ್ರಮಕ್ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News