×
Ad

​ಮಲೈಕಾ ಸೊಸೈಟಿಯಿಂದ ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ ಆರೋಪ‌‌‌‌‌ : ದೂರು ದಾಖಲು

Update: 2020-11-19 21:58 IST

ಮಂಗಳೂರು, ನ.19: ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ ಬಗ್ಗೆ ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈ, ಮಂಗಳೂರು, ಉಡುಪಿ ಮತ್ತಿತರ ಕಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ.  ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ದರ ನೀಡುವ ಮೂಲಕ ಸಾವಿರಾರು ಮಂದಿಯನ್ನು ತನ್ನೆಡೆಗೆ ಸೆಳೆದು ಕೋಟ್ಯಂತರ ರೂ. ಹೂಡಿಕೆ ಮಾಡುವಂತೆ ಮಾಡಿದ್ದರು ಎನ್ನಲಾಗಿದೆ. ಬಹುತೇಕ ಉನ್ನತ ಹುದ್ದೆಯಲ್ಲಿದ್ದವರು ನಿವೃತ್ತಿಯಾದಾಗ ಲಭಿಸಿದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದರು. ಅದರ ಅವಧಿ ಮುಗಿದ ಬಳಿಕ ಹಣ ಹಿಂತಿರುಗಿಸುವಂತೆ ಕೇಳಿದಾಗ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆ ಹಣವನ್ನು ಸೊಸೈಟಿ ಮಾಲಕರು ತಮ್ಮ ಖಾತೆಗೆ ಜಮೆ ಮಾಡಿರುವುದು ಗಮನಕ್ಕೆ ಬಂದು 100ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವರಿಗೆ ವಂಚನೆ ಆಗಿದ್ದು,  ಅವರ ಹೆಸರನ್ನು ನಮೂದಿಸಿ ಒಬ್ಬರ ಹೆಸರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದಿರೆ ಮೊದಲಾದ ಕಡೆ ಮಲೈಕಾ ಎಲೆಕ್ಟ್ರಾನಿಕ್ಸ್ ಮಳಿಗೆಗಳಿವೆ. ನಗರದ  ಬೆಂದೂರ್‌ವೆಲ್‌ನಲ್ಲಿ ಸೊಸೈಟಿಯು ಪ್ರಧಾನ ಕಚೇರಿಯನ್ನು ಹೊಂದಿದೆ. ಜಿಲ್ಲೆಯಲ್ಲಿ 800ಕ್ಕೂ ಅಧಿಕ ಗ್ರಾಹಕರನ್ನು ಸೊಸೈಟಿ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಒಟ್ಟು ಎಷ್ಟು ಮಂದಿಗೆ ಎಷ್ಟು ಮೊತ್ತ ವಂಚನೆಯಾಗಿದೆ ಎಂಬುದು ಪತ್ತೆ ಮಾಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News